

ಎಂ.ಎಸ್. ಸಿದ್ದಲಿಂಗೇಶ್ವರ್, ಮಾಗಡಿ
ತಾಲೂಕು ಕಚೇರಿಗೆ ತಿಂಗಳುಗಟ್ಟಲೆ ಅಲೆದರೂ ಮೂಲ ದಾಖಲೆಗಳ ನಕಲು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರು ತಾಲೂಕು ಆಡಳಿತದ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆಯ ರೆಕಾರ್ಡ್ ಶಾಖೆಯಲ್ಲಿ 2002ರ ಹಿಂದಿನ ಕೈಬರವಣಿಗೆ ಪಹಣಿ, ಮ್ಯುಟೇಷನ್, ತಹಸೀಲ್ದಾರ್ ಆದೇಶ ಪ್ರತಿ, ಗೋಮಾಳದ ಉಳುಮೆ ಚೀಟಿ, ಎಂಆರ್ ಮ್ಯುಟೇಷನ್ ನಕಲು ಪಡೆಯಲು ಅರ್ಜಿ ಸಲ್ಲಿಸಿದರೆ ವಾರದೊಳಗೆ ನೀಡಬೇಕಾದ ದಾಖಲೆಗಳನ್ನು ತಿಂಗಳಾದರೂ ನೀಡುತ್ತಿಲ್ಲ. ಜಮೀನು ದಾಖಲೆ ತಿದ್ದುಪಡಿ ಮಾಡಲು ದಾಖಲೆಗಳು ಅಗತ್ಯವಾಗಿದ್ದು, ದಾಖಲೆಗಳ ನಕಲು ಪಡೆಯಲು ಅರ್ಜಿ ಸಲ್ಲಿಸಿ ತಿಂಗಳಾದರೂ ನೀಡದಿರುವುದರಿಂದ ಸಮಸ್ಯೆಯಾಗುತ್ತಿದೆ. ಇನ್ನು ಮದುವೆ, ಆರೋಗ್ಯ ಸಮಸ್ಯೆ ಉಂಟಾದಾಗ ಖರ್ಚು ಭರಿಸಲು ಜಮೀನು ಮಾರಾಟ ಮಾಡಲು ಮುಂದಾದರೆ ತೊಂದರೆ ಆಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ದಾಖಲೆಗಳ ಗಣಕೀಕರಣ ಆಗಿಲ್ಲ
1969ಕ್ಕೂ ಹಿಂದೆ ಗ್ರಾಮಗಳಲ್ಲಿದ್ದ ಪಟೇಲರು, ಶಾನುಭೋಗರು ಜಮೀನಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಬರೆಯುತ್ತಿದ್ದರು. ನಂತರ ಗ್ರಾಮ ಲೆಕ್ಕಾಧಿಕಾರಿ (ವಿಎ) ಹಾಗೂ ಕಂದಾಯ ಇನ್‌ಸ್ಪೆಕ್ಟರ್ (ಆರ್‌ಐ) ಗಳನ್ನು ನೇಮಕ ಮಾಡಲಾಗಿದೆ. 2002ರ ನಂತರ ಕಂಪ್ಯೂಟರ್ ದಾಖಲೆಗಳನ್ನು ನೀಡಲಾಗುತ್ತಿದೆ. ಬೇರೆ ತಾಲೂಕುಗಳಲ್ಲಿ ಎಲ್ಲ ದಾಖಲೆಗಳನ್ನು ಸ್ಕಾೃನ್ ಮಾಡಿ ಗಣಕೀಕರಣ ಮಾಡಲಾಗಿದೆ. ಆದರೆ ತಾಲೂಕಿನಲ್ಲಿ ಈ ಕಾರ್ಯ ಮಾಡದಿರುವುದರಿಂದ ಸಮಸ್ಯೆಯಾಗುತ್ತಿದೆ ಎನ್ನುವುದು ನಾಗರಿಕರ ವಾದವಾಗಿದೆ.
ಹಣ ಕೊಟ್ಟವರಿಗೆ ಶೀಘ್ರ ದಾಖಲೆ
ಮೂಲಪತ್ರಗಳ ನಕಲಿ ದಾಖಲೆ ಪಡೆಯಲು ಪ್ರತಿನಿತ್ಯ 500ಕ್ಕೂ ಹೆಚ್ಚು ಮಂದಿ ಹಳೆಯ ರೆಕಾರ್ಡ್ ಶಾಖೆಗೆ ಅಲೆಯುವಂತಾಗಿದೆ. ಇಲ್ಲಿ ಅನುಭವಿ ಅಧಿಕಾರಿಗಳನ್ನು ನೇಮಕ ಮಾಡದೆ ಗ್ರಾಮ ಸೇವಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರಿಗೆ ದಾಖಲೆಗಳು ಎಲ್ಲಿವೆ ಎಂಬುದೇ ತಿಳಿದಿಲ್ಲ. ಬೆಂಗಳೂರು ನಗರ, ದಕ್ಷಿಣ ಹಾಗೂ ಉತ್ತರ ತಾಲೂಕಿನಲ್ಲಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದ 2 ದಿನದೊಳಗೆ ನಕಲು ಪ್ರತಿಗಳು ಸಿಗುತ್ತವೆ. ಆದರೆ, ಮಾಗಡಿಯಲ್ಲಿ ತಿಂಗಳು ಕಳೆದರೂ ಸಿಗುತ್ತಿಲ್ಲ. ಹಣ ನೀಡಿದವರಿಗೆ ಸಮೀಪದ ಜೆರಾಕ್ಸ್ ಅಂಗಡಿ ಬಳಿ ಇರುವಂತೆ ಹೇಳಿ ಕೂಡಲೇ ದಾಖಲೆಗಳನ್ನು ಸಿದ್ಧಪಡಿಸಿ ನೀಡುತ್ತಾರೆ ಎಂದು ನೊಂದವರು ಅಳಲು ತೋಡಿಕೊಂಡಿದ್ದಾರೆ.
ನಾಶವಾಗುವತ್ತ ಅಮೂಲ್ಯ ದಾಖಲೆಗಳು
ಮೂಲ ದಾಖಲೆಯ ನಕಲು ಪಡೆಯಲು ಅರ್ಜಿ ಸಲ್ಲಿಸಿದವರಿಗೆ ನಿಮ್ಮ ದಾಖಲೆಗಳನ್ನು ಹುಡುಕಿಕೊಳ್ಳಿ ಎಂದು ನೀಡುವುದರಿಂದ ಅನೇಕ ಮಂದಿ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ನಿದರ್ಶನಗಳಿವೆ. ತಾಲೂಕು ಕಚೇರಿಯ ಹಳೆಯ ದಾಖಲೆ ಶಾಖೆಯಲ್ಲಿ ಶೇ.60 ದಾಖಲೆಗಳೇ ಇಲ್ಲದಂತಾಗಿದೆ. ಬಹಳಷ್ಟು ದಾಖಲೆಗಳು ಹರಿದು ಹೋಗಿದ್ದರೆ, ಮತ್ತಷ್ಟು ಹಾಳಾಗಿವೆ. ದಾಖಲೆಗಳಿರುವ ಶಾಖೆಗೆ ಕಾಯಂ ನೌಕರರನ್ನು ನೇಮಿಸದೆ ಖಾಸಗಿ ವ್ಯಕ್ತಿಗಳನ್ನು ನಿಯೋಜಿಸಿರುವುದರಿಂದ ಎಷ್ಟೋ ದಾಖಲೆಗಳು ಇಲ್ಲದಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರೈತರು ಒತ್ತಾಯಿಸಿದ್ದಾರೆ.
ರೆಕಾರ್ಡ್ ರೂಂನಲ್ಲಿ ಅವ್ಯವಸ್ಥೆಯಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ದಾಖಲೆಗಳನ್ನು ಪಡೆಯಲು ಅಲೆದಾಡಿ ಚಪ್ಪಲಿ ಸವೆದಿದೆ. ಹಣ ನೀಡಿದವರಿಗೆ ಕೂಡಲೇ ಸಿಗುತ್ತದೆ. ಕ್ರಮಬದ್ಧವಾಗಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು.
ನಂಜಯ್ಯ, ರೈತ ಮುಖಂಡ, ಮಾನಗಲ್ಲು
ಡಿಕ್ರಿ ಕಾಪಿ ಪಡೆಯಲು ಅರ್ಜಿ ಸಲ್ಲಿಸಲು ತಿಂಗಳು ಕಳೆದಿದೆ. ನಕಲು ಪ್ರತಿ ಪಡೆಯಲು ಸರತಿ ಸಾಲಿನಲ್ಲಿ ನಿಂತರೆ ಬಲಾಢ್ಯರು, ಪ್ರಭಾವಿಗಳು ನೇರವಾಗಿ ಶಾಖೆಯ ಒಳಹೊಕ್ಕು ದಾಖಲೆ ಪಡೆದುಕೊಂಡು ಹೋಗುತ್ತಾರೆ. ಬೇರೆಯವರೂ ತಾಸುಗಟ್ಟಲೆ ಕಾಯ್ದರೂ ಸಿಗುತ್ತಿಲ್ಲ ಹಾಗೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ.
ಲಕ್ಷ್ಮಿ, ರೈತ ಮಹಿಳೆ, ಕೆಂಪಸಾಗರ
ರೆಕಾರ್ಡ್ ರೂಂನಲ್ಲಿ ಈ ಹಿಂದೆ ಇದ್ದವರು ಇಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಕುದೂರಿನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೆರಾಕ್ಸ್ ಯಂತ್ರ ಕೆಟ್ಟಿದ್ದು ಕ್ರಮಬದ್ಧವಾಗಿ ಅರ್ಜಿಗಳನ್ನು ಪಡೆದು ವಿಲೇವಾರಿ ಮಾಡಲಾಗುವುದು. ಜನರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
ಜಿ.ಸುರೇಂದ್ರ ಮೂರ್ತಿ ತಹಸೀಲ್ದಾರ್