ಹಲವು ಕಾಯಿಲೆಗಳಿಗೆ ಸಿರಿಧಾನ್ಯ ರಾಮಬಾಣ ವಿಜ್ಞಾನಿ ಡಾ. ಲತಾ ಆರ್. ಕುಲಕರ್ಣಿ ಅಭಿಮತ

17 RMN-MGD P2
Published on

ಮಾಗಡಿ

ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಅಗತ್ಯವಾಗಿದೆ ಎಂದು ಹಿರಿಯ ವಿಜ್ಞಾನಿ ಡಾ. ಲತಾ ಆರ್ ಕುಲಕರ್ಣಿ ಹೇಳಿದರು.

ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿರಿಧಾನ್ಯ ಬೆಳೆಯ ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಮಧುಮೇಹ, ಬೊಜ್ಜು, ಹೃದಯ ಕಾಯಿಲೆ, ರಕ್ತಹೀನತೆ ದೂರ ಮಾಡಲು ಸಿರಿಧಾನ್ಯ ರಾಮಬಾಣವಾಗಿದೆ. ಪ್ರತಿನಿತ್ಯ ಸಿರಿಧಾನ್ಯ ಬಳಸುವುದರಿಂದ ಹಲವಾರು ಕಾಯಿಲೆಗಳು ದೂರವಾಗಲಿವೆ ಎಂದರು.

ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಮಹತ್ವ ಮತ್ತು ತಾಂತ್ರಿಕತೆಗಳನ್ನು ವಿವರಿಸುತ್ತ, ಸಿರಿಧಾನ್ಯ ಆಧಾರಿತ ಡಯಾಬೀಟಿಸ್ ಮಿಕ್ಸ್, ಮಾಲ್ಟ್, ಬಿಳಿರಾಗಿ ಲಡ್ಡು, ಬಿಳಿರಾಗಿ ನಿಪ್ಪಟ್ಟು, ಚಕ್ಕಲಿ, ನವಣೆ ಬಿಸಿಬೇಳೆ ಬಾತ್, ನವಣೆ ಪಾಯಸ ಮಿಕ್ಸ್ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ದಿನನಿತ್ಯ ಆಹಾರದಲ್ಲಿ ಸಿರಿಧಾನ್ಯ ಬಳಕೆ ಮಾಡಬೇಕು ಹಾಗೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚು ಆದಾಯ ಗಳಿಸಬಹುದು ಎಂದರು.

ವಿಜ್ಞಾನಿ ಡಾ. ಎಸ್. ಸೌಜನ್ಯ ಮಾತನಾಡಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 95ನೇ ಸಂಸ್ಥಾಪನಾ ದಿನದ ಮಹತ್ವವನ್ನು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದಲ್ಲಿನ ವಿವಿಧ ನವೀನ ತಂತ್ರಜ್ಞಾನಗಳ ಮಾಹಿತಿಯನ್ನು ವಸ್ತು ಪ್ರದರ್ಶನದ ಮೂಲಕ ತಿಳಿಸಲಾಯಿತು.

ಒಕ್ಕೂಟದ ಸಂಯೋಜಕ ಸತೀಶ್, ಕೃಷಿ ವಿಜ್ಞಾನ ಕೇಂದ್ರದ ನರಸಿಂಹಾಚಾರ್, ಜಯಂತಿ, ಸರಸ್ವತಮ್ಮ, ಶಿವಶಂಕರ್, ಲೋಕೇಶ್, ಪವನ್, ಹರಿಪ್ರಸಾದ್, ಸಿದ್ದಪ್ಪ, ಲೀಲಾ ಸೇರಿ 30ಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net