ಪ್ರತಿಲಾಪೇಕ್ಷೆ ಇಲ್ಲದ ಕೆಲಸವೇ ಸೇವೆ

16 RMN-MGD P1
Published on
  • ಮಾಗಡಿ ರೋಟರಿ ಪದವಿ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡ ಅಭಿಮತ

ಮಾಗಡಿ
ಪ್ರಪಂಚದಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕಿದ್ದು, ರೋಟರಿ ಸಂಸ್ಥೆ ಆ ವಿಚಾರದಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರಾಧ್ಯಾಪಕ, ಹಾಸ್ಯಗಾರ ಪ್ರೊ.ಕೃಷ್ಣೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ಧಾರೂಢ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರೋಟರಿ ಮಾಗಡಿ ಸೆಂಟ್ರಲ್‌ನ 8ನೇ ವರ್ಷದ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕೆಂಪೇಗೌಡ, ಸಿದ್ಧಗಂಗಾ ಶ್ರೀಗಳು, ಸಾಲುಮರದ ತಿಮ್ಮಕ್ಕ, ದಲಿತ ಕವಿ ಸಿದ್ದಲಿಂಗಯ್ಯ ಸೇರಿ ಅನೇಕ ಮಹಾ ಪುರುಷರನ್ನು ಕೊಟ್ಟ ಪುಣ್ಯಭೂಮಿ. ಮನುಷ್ಯನ ಮಾತುಗಳು, ನಂಬಿಕೆ ಎಂದಿಗೂ ಕೆಡಬಾರದು. ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಮಾಡುವ ಕೆಲಸ ಸೇವೆ ಅಲ್ಲ, ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ ಸೇವೆ. ಮಾಡುವ ದಾನದಲ್ಲಿ ಅಹಂಕಾರ ಇರಬಾರದು. ಇಂತಹ ತತ್ವ ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಮನುಷ್ಯ ಸಾರ್ಥಕತೆ ಕಾಣಬಹುದು ಎಂದರು.
ಮನುಷ್ಯನ ಹೃದಯದಲ್ಲಿ ಹೃದಯವಂತಿಕೆಗೆ ಜಾಗ ಇಲ್ಲದಂತಾಗಿದೆ. ಇದು ಸಮಾಜಕ್ಕೆ ಅಪಾಯಕಾರಿ. ತನ್ನ ನಿಷ್ಠೆ, ಕಾಯಕ ಪ್ರಜ್ಞೆ ಬಿಟ್ಟಿರುವುದರಿಂದ ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ನೂತನ ಅಧ್ಯಕ್ಷ ಪ್ರಭಾಕರ್ ಮಾತನಾಡಿ, 2 ಚೆಕ್ ಡ್ಯಾಮ್ ನಿರ್ಮಿಸಿ ಅಂತರ್ಜಲ ವೃದ್ಧಿ, ಹೋಬಳಿ ಮಟ್ಟದಲ್ಲಿ ಆರೋಗ್ಯ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ ಸಮಸ್ಯೆ ಇರುವ ಗ್ರಾಮಗಳಲ್ಲಿ ಸೋಲಾರ್ ಅಳವಡಿಕೆ, ಅಂಗವಿಕಲರಿಗೆ ವಿಲ್‌ಚೇರ್, ಪಶು ಆರೋಗ್ಯ ಶಿಬಿರ,10 ಎಕರೆ ಲೇಔಟ್‌ಗಳಲ್ಲಿ ಸಸಿ ನೆಟ್ಟು ಪೋಷಣೆ, ಸರ್ಕಾರಿ ಶಾಲೆಗಳಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿ ತಾಣಗಳ ಸ್ವಚ್ಛತೆ ಮತ್ತು ಅರಿವು, ಬಡ ರೈತರಿಗೆ 30 ಲಕ್ಷ ರೂ.ಮೌಲ್ಯದ ಹಸುಗಳ ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ನಿರ್ಗಮಿತ ಅಧ್ಯಕ್ಷ ಗ್ರಾನೈಟ್ ಶಂಕರ್ ಮಾತನಾಡಿ, ರೋಟರಿ ಆರಂಭವಾಗಿ 7ವರ್ಷ ಕಳೆದಿದೆ. 7ನೇ ಅಧ್ಯಕ್ಷನಾಗಿ ಅನೇಕ ಜನಪರ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ನೀಡಿದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ರುಚಿತಾ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಫಝೋಲ್ ಮಹಮ್ಮದ್, ಕುಮಾರಸ್ವಾಮಿ, ರವಿಕುಮಾರು, ವಕೀಲ ಪ್ರಸಾದ್, ಮುನಿಯಪ್ಪ ಕೆ.ರಾಜೀವ್, ಮೋಹನ್, ಗಣೇಶ್, ಮಹಂತೇಶ್, ಸಿದ್ದಪ್ಪಾಜಿ, ಪುಟ್ಟಸ್ವಾಮಿ, ಅರವಿಂದ ನಾಯ್ಕ, ಲ್ಯಾಬ್ ಲೋಕೇಶ್, ಮಂಜುನಾಥ್ ಅಚಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net