

ಮಾಗಡಿ
ತಾಲೂಕು ಕಚೇರಿಯಲ್ಲಿನ ಲಂಚಾವತಾರ, ಅವೈಜ್ಞಾನಿಕ ಕೆಶಿಪ್ ರಸ್ತೆ, ಭರ್ಗಾವತಿ ಕೆರೆಗೆ ಕಲುಷಿತ ನೀರು ಸೇರ್ಪಡೆ, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದನ್ನು ಖಂಡಿಸಿ ತಾಲೂಕು ಕಚೇರಿ ಎದುರು ತಾಲೂಕು ರೈತ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಇಸಿ ಪಡೆಯಲು ವಿಳಂಬ, ಕೆಶಿಪ್ ರಸ್ತೆ ಕಾಮಗಾರಿ ಅವೈಜ್ಞಾನಿಕ, ರೆಕಾರ್ಡ್ ರೂಂನಲ್ಲಿ ದಾಖಲೆ ಪಡೆಯಲು ರೈತರ ಅಲೆದಾಟ, ಬದುಕಿರುವ ವ್ಯಕ್ತಿಗೆ ಮರಣ ಪತ್ರ ನೀಡುತ್ತಿದ್ದಾರೆ. ಕೆಂಪಾಪುರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ, ಭರ್ಗಾವತಿ ಕೆರೆಗೆ ಪಟ್ಟಣದ ಕಲುಷಿತ ನೀರು ಸೇರಿ ಈ ಭಾಗದ ರೈತರು ವಿಷದ ನೀರು ಕುಡಿಯುವಂತಾಗಿದೆ, ಈ ಬಗ್ಗೆ 3 ಬಾರಿ ಹೋರಾಟ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಆ.10ರ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ ಸೋಮೇಶ್ವರ ಕಾಲನಿ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಹೋರಾಟ ಹಮ್ಮಿಕೊಳ್ಳಲಾಗುವುದು. ನಮ್ಮ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಜತೆ ಮಾತನಾಡಿದ ತಹಶೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಇನ್ನೊಂದು ವಾರದ ಒಳಗೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮನ ಒಲಿಸಿದರೂ ರೈತರು ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕ ಎಚ್.ಸಿ. ಬಾಲಕೃಷ್ಣ, ಹಣ ಪಡೆಯಿರಿ ಎಂದು ಯಾರಿಗೂ ಹೇಳಿಲ್ಲ. ಯಾವ ಅಧಿಕಾರಿ ಹಣ ಪಡೆಯುತ್ತಿದ್ದಾರೆ ಎಂದು ತಿಳಿಸಿ. ಸುಖಾ ಸುಮ್ಮನೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದರು. ಹಾಗೂ ಮರಣ ಪತ್ರ ನೀಡಿರುವ ಗ್ರಾಮ ಲೆಕ್ಕಾಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ಪ್ರತಿ ತಿಂಗಳ 2ನೇ ಮಂಗಳವಾರ ತಾಲೂಕು ಕಚೇರಿಗೆ ಬರುತ್ತೇನೆ. ಯಾವ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ, ಕೆಲಸ ವಿಳಂಬ ಮಾಡುವ ಅಧಿಕಾರಿಗಳ, ದಲ್ಲಾಳಿಗಳ ಬಗ್ಗೆ ತಿಳಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರೈತ ಮುಖಂಡರಿಗೆ ತಿಳಿಸಿದರು.
ಸರ್ವೇ ಇಲಾಖೆಯಲ್ಲಿ ಜಮೀನು ಸರ್ವೆ ನಡೆಸುವ ಬಗ್ಗೆ ನೋಟಿಸ್ ಬೋರ್ಡ್‌ನಲ್ಲಿ ದಿನಾಂಕ ನಿಗದಿಪಡಿಸಿ ರೈತರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು. ಕಾನೂನು ಬದ್ಧವಾಗಿರುವ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿ ಪ್ರತಿ ತಿಂಗಳು ಅಧಿಕಾರಿಗಳ ಸಭೆ ಕರೆದು ರೈತರ ಕೆಲಸ ಮಾಡಿಕೊಡದೆ ನಿರ್ಲಕ್ಷ್ಯಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಶಾಸಕರು ತಿಳಿಸಿದರು.
ಭರ್ಗಾವತಿ ಕೆರೆಗೆ ಸೇರುತ್ತಿರುವ ಪಟ್ಟಣದ ಕಲುಷಿತ ನೀರು ತಡೆಯಲು ಅಧಿಕಾರಿಗಳ ನಿರ್ಲಕ್ಷ್ಯತೆ ಏಕೆ ಎಂದು ಒಳಚರಂಡಿ ಅಧಿಕಾರಿಗಳ ವಿರುದ್ಧ ಶಾಸಕರು ಕೆಂಡಾಮಂಡಲರಾದರು. ತಾತ್ಕಾಲಿಕವಾಗಿ ಇಬ್ಬರನ್ನು ನೇಮಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಇಂಜಿನಿಯರ್‌ಗಳ ಸಮಸ್ಯೆ ಇದ್ದರೆ ತಿಳಿಸಿ, ಲೋಕೋಪಯೋಗಿ ಇಲಾಖೆಯಿಂದ ಓರ್ವ ಇಂಜಿನಿಯರ್ ನೇಮಿಸಲಾಗುವುದು ಎಂದರು.
ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಸಮರ್ಪಕವಾಗಿ ಮಳೆ ಇಲ್ಲದೆ ರೈತರು ರಾಗಿ ಬಿತ್ತನೆ ಮಾಡದೆ ಸಂಕಷ್ಟದಲ್ಲಿದ್ದಾರೆ. ಮಾಗಡಿಯನ್ನು ಬರಪೀಡಿತ ತಾಲೂಕು ಎಂದು ಮುಖ್ಯಮಂತ್ರಿಗಳು ಘೋಷಿಸಬೇಕು ಎಂದು ಲೋಕೇಶ್ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಶಿವರುದ್ರಯ್ಯ, ಗಿರೀಶ್, ರವಿಕುಮಾರು, ಪುಟ್ಟರಾಜು, ನಿಂಗಣ್ಣ, ಚನ್ನರಾಯಪ್ಪ, ಷಡಾಕ್ಷರಿ, ಬುಡನ್ ಸಾಬ್, ಕಾಂತರಾಜು, ಲೋಕೇಶ್, ಧನಂಜಯ ಇತರರು ಇದ್ದರು.