

ಎಂ.ಎಸ್. ಸಿದ್ದಲಿಂಗೇಶ್ವರ್ ಮಾಗಡಿ
ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕಲಾವಿದ ಕಂಡ ಅನ್ನೋ ಮಾತಿದೆ. ಅದೇ ರೀತಿ ಕಲಾವಿದನ ಕುಂಚದಲ್ಲಿ ಅರಳುವ ಕಲೆಗೆ ಜೀವ ತುಂಬುವುದು ಸುಲಭದ ಕೆಲಸವಲ್ಲ. ಕಲಾವಿದನಿಗೆ ಶ್ರದ್ಧೆ, ಶ್ರಮದ ಜತೆಗೆ ಕಲ್ಪನೆ ಇದ್ದಾಗಲೇ ಅಂದುಕೊಂಡಂತಹ ರೀತಿಯಲ್ಲಿ ಕಲೆಗೆ ಜೀವ ತುಂಬಲು ಸಾಧ್ಯ.
ಗಣೇಶೋತ್ಸವ ಹತ್ತಿರವಾಗುತ್ತಿದೆ. ಭಕ್ತರು ವಿವಿಧ ರೂಪಗಳಲ್ಲಿ ಗಣೇಶ ಮೂರ್ತಿಯನ್ನು ನೋಡಲು ಆಸೆಪಡುತ್ತಾರೆ. ಅದೇ ರೀತಿ ಗ್ರಾಹಕರ ಇಷ್ಟಕ್ಕೆ ತಕ್ಕಂತೆ ತಯಾರಕರು ಮೂರ್ತಿಗಳನ್ನು ಸಿದ್ಧಪಡಿಸಬೇಕಾಗುತ್ತದೆ.
ಮಾಗಡಿಯ ಕುಂಬಾರ ಬೀದಿಯ ದಿವಗಂತ ಮಲ್ಲಣ್ಣ ಕುಟುಂಬದವರು ಕಳೆದ 93 ವರ್ಷಗಳಿಂದ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವುದರಲ್ಲಿ ಎತ್ತಿದ ಕೈ. ಕುಟುಂಬದ ಹಿರಿಯ ಮಗ ಮಂಜಣ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರ ನಿಧನದ ನಂತರ ಸೋದರ ಗಣೇಶ್ ಮತ್ತು ನಂಜುಂಡಸ್ವಾಮಿ ಕಾಯಕ ಮುಂದುವರಿಸಿದ್ದಾರೆ.
ಮಲ್ಲಣ್ಣ ಕುಟುಂಬದವರು ತಯಾರಿಸುವ ಗಣೇಶ ಮೂರ್ತಿಗಳಿಗೆ ರಾಜ್ಯ ಮತ್ತು ನೆರೆ ರಾಜ್ಯಗಳಿಂದಲೂ ಗ್ರಾಹಕರು ಬರುತ್ತಾರೆ. ಬೇಡಿಕೆಗೆ ತಕ್ಕಂತೆ ಅರ್ಧ ಅಡಿಯಿಂದ 15 ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸುತ್ತಾರೆ. 3 ಅಡಿಗಿಂತ ಎತ್ತರದ ಮೂರ್ತಿಗಳನ್ನು ಕೈಯಿಂದಲೇ ಸಿದ್ಧಪಡಿಸುವುದು ಇವರ ವಿಶೇಷ. ಮಲ್ಲಣ್ಣ ಅವರ ನಾಲ್ವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಗಣೇಶ ಹಬ್ಬಕ್ಕೆ 3 ತಿಂಗಳು ಮುಂಚೆಯೇ ಗಣೇಶನ ತಯಾರಿಯಲ್ಲಿ ಕೈಜೋಡಿಸುತ್ತಾರೆ. ಇವರು ತಯಾರಿಸುವ ಗಣೇಶ ಮೂರ್ತಿಗಳ ಬೆಲೆ 50 ರೂ.ನಿಂದ ಆರಂಭವಾಗಿ 50-60 ಸಾವಿರ ರೂ.ವರೆಗೂ ಇರುತ್ತದೆ.
ಜೇಡಿಮಣ್ಣು, ವಾಟರ್ ಪೇಂಟ್
ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುವುದನ್ನು ಮಲ್ಲಣ್ಣ ಕುಟುಂಬದವರು ಕರಗತ ಮಾಡಿಕೊಂಡಿದ್ದಾರೆ. ರಾಸಾಯನಿಕ ಬಣ್ಣಗಳನ್ನು ಬಳಸದೆ ಪರಿಸರಕ್ಕೆ ಹಾನಿಯಾಗದಂತಹ ವಾಟರ್ ಪೇಯಿಂಟ್ ಬಳಸಿ ಗಣೇಶ ಮೂರ್ತಿಯ ಅಂದ ಹೆಚ್ಚಿಸುತ್ತಾರೆ. ತಾಲೂಕಿನ ವಿಶ್ವನಾಥಪುರ, ಕಲ್ಯಾ, ಬಿಸ್ಕೂರು ಕೆರೆಯಿಂದ ಲೋಡ್‌ಗಟ್ಟಲೆ ಜೇಡಿಮಣ್ಣು ತಂದು ಬಸವ ಜಯಂತಿಯಂದು ಸಂಪ್ರದಾಯಬದ್ಧವಾಗಿ ಜೇಡಿಮಣ್ಣಿಗೆ ಪೂಜೆ ಮಾಡಿ
ಅದೇ ದಿನದಿನ ಗೌರಿ, ವಿಘ್ನ ವಿನಾಯಕನ ಸಣ್ಣ ಮೂರ್ತಿಯನ್ನು ಸಾಂಕೇತಿಕವಾಗಿ ತಯಾರಿಸಿ ಗಣೇಶ ಮೂರ್ತಿ ತಯಾರಿಕೆಗೆ ಚಾಲನೆ ನೀಡುತ್ತಾರೆ.
ಯಾವ್ಯಾನ ನಮೂನೆ?
ಭದ್ರಕಾಳಿ, ದಕ್ಷಿಣಾಮೂರ್ತಿ, ಮಲೇಷಿಯಾ ಮುರುಗ, ಗರುಡವಾಹನ, ಆನೆಮುಖ, ಈಶ್ವರ ಗಣಪತಿ, ಢಮರುಗ ಗಣಪತಿ, ರಾಮನ ಅವತಾರ, ಗೋಪಾಲಕೃಷ್ಣ, ಮುಂಬೈ ಸಿದ್ದಿವಿನಾಯಕ ಗಣಪತಿ ಸೇರಿ ಸಾಂಪ್ರದಾಯಿಕ ಚೌತಿ ಗಣಪತಿ, ಪೇಟಾ ಗಣಪನ ಮೂರ್ತಿಗಳನ್ನು ಮಲ್ಲಣ್ಣರ ಮಗ ಎಂ. ಗಣೇಶ್, ನಂಜುಂಡಸ್ವಾಮಿ, ಗಿರೀಶ್, ಮತ್ತು ಹೇಮಂತ್ ಕುಮಾರ್ ತಯಾರಿಸಿದ್ದಾರೆ. ಈ ಬಾರಿ ಮಲೇಷಿಯಾ ಮುರುಗ, ಆನೆ ಮುಖ, ಗರುಡ ವಾಹನ ರೂಪದ ಗಣಪತಿ ಎಲ್ಲರ ಆಕರ್ಷಣೆಯಾಗಿದೆ. ಗಣಪನನ್ನು ನೋಡಲು ಸಾಕಷ್ಟು ಮಂದಿ ಮುಗಿಬೀಳುತ್ತಿದ್ದು ತಯಾರಿಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಕಲಾವಿದ ಗಣೇಶ್.
ಸಹಕಾರ ಸಿಗದಿದ್ದರೆ ಬದುಕು ದುಸ್ತರ
ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಬೆಲೆ ದುಬಾರಿಯಾಗಿದೆ. ಆದರೆ, ಹಳೆಯ ದರದಲ್ಲೇ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಯಾವ ಬ್ಯಾಂಕ್‌ಗಳಿಂದಲೂ ಆರ್ಥಿಕ ನೆರವು ಸಿಗುತ್ತಿಲ್ಲ. ಸರ್ಕಾರ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಜನಪ್ರತಿನಿಧಿಗಳು ಕೂಡ ನಮ್ಮ ಸಂಕಷ್ಟ ಆಲಿಸುತ್ತಿಲ್ಲ ಎನ್ನುತ್ತಾರೆ ಕಲಾವಿದ ಎಂ.ಗಣೇಶ್.
ಗಣೇಶ ತಯಾರಕರಿಗೆ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ನೀಡಿದರೆ ಅನುಕೂಲವಾಗುತ್ತದೆ. ಕಷ್ಟಪಟ್ಟು ಪರಿಸರಸ್ನೇಹಿ ಗಣೇಶಮೂರ್ತಿ ತಯಾರಕನ್ನು ಸ್ಥಳೀಯವಾಗಿಯೂ ಕಡೆಗಣಿಸಲಾಗಿದೆ.
ಹೇಮಂತ್ ಕುಮಾರ್, ಕಲಾವಿದ