ರಾಗಿ ಬಿತ್ತನೆ ಕುಂಠಿತ ವರುಣನ ಕೃಪೆಗಾಗಿ ಕಾದು ಕುಳಿತ ಅನ್ನದಾತ

farmer
Published on

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ರಾಗಿ ಬಿತ್ತನೆಗೆ ವರುಣ ಕೈಕೊಟ್ಟಿರುವುದರಿಂದ ಬಿತ್ತನೆ ಕುಂಠಿತಗೊಂಡಿದೆ. ರಾಗಿ ಉತ್ಪಾದನೆಯಲ್ಲಿ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಯಾವ ಭಾಗದಲ್ಲೂ ರಾಗಿ ಬೆಳೆಯಾಗದಿದ್ದರೂ, ತಾಲೂಕಿನಲ್ಲಿ ಬೆಳೆ ಉತ್ತಮವಾಗಿರುತ್ತದೆ ಎಂಬ ವಾಡಿಕೆ ಇಂದಿಗೂ ಇದೆ. ಆದರೆ, ಮಳೆಯ ಕೃಪೆ ಇಲ್ಲದೆ, ರೈತರು ಬಿತ್ತನೆ ಮಾಡಲು ಅಸಾಧ್ಯವಾಗಿದ್ದು, ಮಳೆಯನ್ನು ಎದುರು ನೋಡುತ್ತಿದ್ದಾರೆ.

ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಬಿತ್ತನೆಗೆ ಅಂದಾಜಿಸಲಾಗಿದೆ. ಈಗಾಗಲೇ 25 ಸಾವಿರ ಹೆಕ್ಟೇರ್ ಪ್ರದೇಶದಷ್ಟು ರಾಗಿ ಬೆಳೆಯಲು ರೈತರು ಜಮೀನಿನ ಸಿದ್ಧತೆ ನಡೆಸಿದ್ದಾರೆ.

ಈ ಬಾರಿ 315 ಮೀಮೀ ಆಗಬೇಕಿದ್ದ ಮಳೆ 312 ಮೀಮೀ ಆಗಿದ್ದು, ಇದರಿಂದ ಬಿತ್ತನೆಗೆ ಬೇಕಾದಷ್ಟು ಮಳೆ ಆಗಿಲ್ಲ.

ಬಿತ್ತನೆ ಬೀಜ ವಿತರಣೆ: 1200 ಕ್ವಿಂಟಾಲ್ ರಾಗಿ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ಈಗಾಗಲೇ ಎಂಆರ್ 1- 226 ಕ್ವಿಂಟಾಲ್, ಎಂಆರ್ 6 -368 ಕ್ವಿಂಟಾಲ್ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ.  1 ಸಾವಿರ ಹೆಕ್ಟೇರ್ ಬಿತ್ತನೆಯಾಗಬೇಕಾದ ತೊಗರಿ-172, ಅಲಸಂದೆ-800 ಹೆಕ್ಟೇರ್‌ಗೆ 150 ಹೆಕ್ಟೇರ್, 800 ಹೆಕ್ಟೇರ್ ಬಿತ್ತನೆ ಆಗಬೇಕಿದ್ದ ಅವರೆ 125 ಹೆಕ್ಟೇರ್, 32 ಸಾವಿರ ಹೆಕ್ಟೇರ್ ರಾಗಿಗೆ 600 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ರಾಗಿ ಬಿತ್ತನೆ ಮಾಡಲು ರೈತರು ಸಾಲ ಮಾಡಿ, ಜಮೀನುಗಳನ್ನು ಉಳುಮೆ ಮಾಡಿದ್ದಾರೆ.

ಮಳೆ ಇಲ್ಲದೆ, ಈ ಬಾರಿ ರಾಗಿ ಬೆಳೆ ಬೆಳೆಯುವುದಾದರೂ ಹೇಗೆ? ಹಸು, ಕರುಗಳಿಗೆ ಹುಲ್ಲು ಹೇಗೆ ತರುವುದು ಎಂಬುದರ ಬಗ್ಗೆ ಚಿಂತೆಯಾಗಿದೆ. ಮಳೆ ಇಲ್ಲದೆ ತೊಂದರೆ ಅನುಭವಿಸುತ್ತಿರುವ ರೈತರು, ಆ.16ರ ಒಳಗೆ ಪ್ರತಿ ಹೆಕ್ಟೇರ್‌ಗೆ 340 ರೂ.ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಕೃಷಿ ತಾಂತ್ರಿಕ ಅಧಿಕಾರಿ ಎಂ.ಮಹೇಶ್ ಮಾಹಿತಿ ನೀಡಿದ್ದಾರೆ.

ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದು, ಅವರ ನೆರವಿಗೆ ಧಾವಿಸಿ, ಬರಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ವಿಧಾನಸೌಧದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಧ್ವನಿ ಎತ್ತದೆ, ಕಾಲಹರಣ ಮಾಡುತ್ತಿರುವುದು ರೈತರಿಗೆ ಬೇಸರ ಮೂಡಿಸಿದೆ ಎಂದು ಪ್ರಗತಿಪರ ರೈತರು ಶಾಸಕರ ನಡೆ ವಿರುದ್ಧ ಕಿಡಿಕಾರದ್ದಾರೆ.

ತಾಲೂಕಿನಲ್ಲಿ ವಾಡಿಕೆಯಂತೆ ಈ ಬಾರಿ ಮಳೆ ಇಲ್ಲದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದು, ಸಾಕು ಪ್ರಾಣಿಗಳಿಗೆ ಮೇವು, ಕುಡಿಯುವ ನೀರಿಗೆ ತೊಂದರೆಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಮಾಗಡಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು.

ಲೋಕೇಶ್, ತಾಲೂಕು ರೈತ ಸಂಘದ ಅಧ್ಯಕ್ಷ

ರೈತರಿಗೆ ಬೇಕಾದ ಸಮರ್ಪಕ ಬಿತ್ತನೆ ಬೀಜ, ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಬಿತ್ತನೆ ಬೀಜಕ್ಕೆ ಯಾವುದೇ ಸಮಸ್ಯೆ ಇಲ್ಲ. ಮುಂಗಾರು ಮಳೆ ಸಮರ್ಪಕವಾಗಿ ಬೀಳದ ಕಾರಣ ಬಿತ್ತನೆ ಕಾರ್ಯ ಕುಂಠಿತವಾಗಿದೆ.

ವಿಜಯಾ, ಸವಣೂರು ಸಹಾಯಕ ಕೃಷಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net