ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಮಾಗಡಿ ನಿವಾಸಿಗಳು

9 mgd-1..
Published on

ಮಾಗಡಿ

ಅಮರನಾಥ ಯಾತ್ರೆಗೆ ತೆರಳಿದ್ದ ತಾಲೂಕಿನ ನಾಲ್ವರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಬರಬೇಕಿದೆ.

ತಾಲೂಕಿನ ಕಾಂಗ್ರೆಸ್ ಮುಖಂಡ ಸಿ.ಜಯರಾಮ್, ಪತ್ರಕರ್ತ ಮಲ್ಲಿಗೆ ಜಗದೀಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಗೋಪಾಲ್, ಕೆಇಬಿ ಶಶಿಧರ್ ಎಂಬುವರು ಅಮರನಾಥನ ದರ್ಶನ ಮುಗಿಸಿಕೊಂಡು ವಾಪಸ್ ತೆರಳುವಾಗ ಜು.6ರಂದು ಭಾರಿ ಮಳೆಗೆ ಭೂಕುಸಿತ ಉಂಟಾಗಿ ಎಲ್ಲ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಪಸ್ ಬರಲಾಗದೆ ಸಂಕಷ್ಟದಲ್ಲಿದ್ದಾರೆ.

ಯಾತ್ರಾರ್ಥಿ ಸಿ.ಜಯರಾಮ್ ದೂರವಾಣಿಯಲ್ಲಿ ಮಾತನಾಡಿ, ಜು.6ರಂದು ಪ್ರಕೃತಿ ವಿಕೋಪದಿಂದಾಗಿ ಭಾರಿ ಮಳೆಯಾಗಿ ಭೂ ಕುಸಿತ ಉಂಟಾಗಿ ಆತಂಕದಲ್ಲಿದ್ದೆವು. ಮಾಗಡಿಯ ಗದ್ದೆ ಬಯಲು ನಿವಾಸಿ ನರಸೇಗೌಡ ಅವರ ಸಹೋದರ ಕೃಷ್ಣಮೂರ್ತಿ ಸಿಆರ್‌ಪಿಎಫ್ ನಲ್ಲಿದ್ದಾರೆ. ಹವಮಾನ ವೈಪರಿತ್ಯದಿಂದ ಹೆಚ್ಚು ಮಳೆಯಾಗುವ ವಾತಾವರಣವಿದೆ. ಆದಷ್ಟು ಬೇಗ ಬಸ್ ಹಿಡಿದು ಜಮ್ಮು ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗಿ ಎಂದು ಸಲಹೆ ನೀಡಿದ್ದರು. ಹಿಮಾಚಲಕ್ಕೆ ತೆರಳುವ ದಾರಿ ಮಧ್ಯೆ ಬಸ್‌ಗಳು ಜಮ್ ಆಗಿದ್ದರಿಂದ ಬೇರೆ ರಸ್ತೆ ಮಾರ್ಗದಲ್ಲಿ ತೆರಳಲು ಪ್ರಯತ್ನಿಸಿದ್ದೇವೆ.

ಆದರೆ ಸಾಧ್ಯವಾಗದೆ ಲಡಾಕ್‌ಗೆ ವಾಪಸಾದೆವು. ಇಲ್ಲಿಂದ ಶ್ರೀನಗರಕ್ಕೆ 500 ಕಿಮೀ ದೂರವಿದೆ. ಹಿಮಾಚಲ ಪ್ರದೇಶ 450 ಕಿಮೀ ಇದೆ. ರಸ್ತೆ ಸಂಪರ್ಕವಿಲ್ಲ, ಇಲ್ಲೊಂದು ಏರ್‌ಪೋರ್ಟ್ ಇದೆ. ಪ್ಲೈಟ್ ವಿಚಾರಿಸಿದೆವು, ಟಿಕೆಟ್ ಇಲ್ಲ, ಜು.15 ರವರೆಗೂ ಬುಕ್ ಆಗಿದೆ. ಇಲ್ಲಿ ಒಂದು ಊಟಕ್ಕೆ 700 ರಿಂದ 800 ರೂ. 1ಲೀ ನೀರು ಬಾಟೆಲ್ 60ರೂನಲ್ಲಿ ದಿನ ಕಳೆಯುತ್ತಿದ್ದು, ಜೀವನವೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ತಹಸೀಲ್ದಾರ್ ಸುರೇಂದ್ರಮೂರ್ತಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೆವು. ನಿಮ್ಮನ್ನು ವಾಪಸ್ ಕರೆತರಲು ಜಿಲ್ಲಾಧಿಕಾರಿಗಳ ಮನವಿ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿಗಳೂ ಸ್ಪಂದಿಸಿದ್ದಾರೆ ಎಂದರು. ನಮಗೆ ಯಾರಾದರೂ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಟ್ಟರೆ ಜೀವ ಉಳಿಸಿಕೊಳ್ಳುತ್ತೇವೆ ಎಂದು ನೆರವು ಕೋರಿದರು.

ಮಾಗಡಿಯ ಯಾತ್ರಾರ್ಥಿಗಳು ಸಂಕಷ್ಟದಲ್ಲಿದ್ದೇವೆ. ವಾಪಸ್ ಬರಲಾಗದೆ ಆತಂಕದಲ್ಲಿದ್ದೇವೆ ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಕೂಡಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಯಾತ್ರಾರ್ಥಿಗಳನ್ನು ವಾಪಸ್ ಕರೆತರಲು ವ್ಯವಸ್ಥೆ ಮಾಡುತ್ತಿದ್ದೇವೆ.

ಎಚ್.ಸಿ.ಬಾಲಕೃಷ್ಣ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net