ಆಧಾರ್​, ಪಾನ್​ ಲಿಂಕ್​ ಮಾಡಿಸಲು ಪರದಾಟ

26 RMN-MGD P4
Published on

ಗ್ರಾಮ ಒನ್​, ಬ್ಯಾಂಕ್​ಗಳಲ್ಲಿ ಜನರ ನೂಕುನುಗ್ಗಲು

ಎಂ.ಎಸ್​. ಸಿದ್ದಲಿಂಗೇಶ್ವರ ಮಾಗಡಿ

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಆಧಾರ್​ ಹಾಗೂ ಪಾನ್​ ಕಾರ್ಡ್​ ಲಿಂಕ್​ ಮಾಡಿಸಬೇಕಿರುವುದರಿಂದ ಬ್ಯಾಂಕ್​ಗಳು ಜನರಿಂದ ತುಂಬಿ ತುಳುಕುತ್ತಿವೆ.

ಯೂನಿಯನ್​ ಬ್ಯಾಂಕ್​, ಬ್ಯಾಂಕ್​ ಆಫ್​ ಬರೋಡ ಸೇರಿ ವಿವಿಧ ಬ್ಯಾಂಕ್​ಗಳ ಪ್ರತಿ ಕೌಂಟರ್​ಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದರಿಂದಾಗಿ ಬ್ಯಾಂಕ್​ಗಳಿಗೆ ಬರುವ ಇತರ ಗ್ರಾಹಕರ ವ್ಯವಹಾರಗಳಿಗೆ ತೊಂದರೆಯಾಗಿದೆ. ಬ್ಯಾಂಕ್​ಗೆ ಹಣ ಕಟ್ಟುವುದು, ಹಣ ಪಡೆಯುವುದು, ಹೊಸ ಖಾತೆ ತೆರೆಯುವವರು ಹಾಗೂ ಇತರ ಸೇವೆ ಪಡೆಯುವವರು ಗಂಟೆಗಟ್ಟಲೆ ಕಾಯುವಂತಾಗಿದೆ.

ಕೆಲವರಿಗೆ ಪಡಿತರ ಸಿಕ್ಕಿಲ್ಲ: ಅನ್ನಭಾಗ್ಯ ಯೋಜನೆ ಜು.1ರಿಂದ ಜಾರಿಗೊಳಿಸಿರುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅದರಂತೆ ಜುಲೈ ಪಡಿತರ ವಿತರಣೆಯಲ್ಲಿ ಬಿಪಿಎಲ್​ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಬೇಕಿತ್ತು. ಆದರೆ ಅಕ್ಕಿ ಲಭ್ಯವಿಲ್ಲದ ಕಾರಣ ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಆಹಾರ ಭದ್ರತಾ ಯೋಜನೆಯಡಿ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದು, ಇದನ್ನು ಹೊರತುಪಡಿಸಿ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡಬೇಕೆಂದು ವಿರೋಧ ಪಕ್ಷಗಳು ಪಟ್ಟುಹಿಡಿದಿವೆ.

 ಕೆಲ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಗೆ ಬದಲಾಗಿ ಹಣ ಜಮಾ ಆಗಿದ್ದು, ಉಳಿದ ಕೆಲವರಿಗೆ ಯಾವುದೇ ಹಣ ಬಂದಿಲ್ಲ. ಈಗಾಗಲೇ ಜುಲೈ ಪಡಿತರ ವಿತರಣೆ ಮುಗಿದಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕೆಲವರಿಗೆ ಪಡಿತರ ದೊರೆತಿಲ್ಲ, ಕೆಲವರ ಪಾಲಿನ ಪಡಿತರ ಧಾನ್ಯ ಏನಾಯಿತು ಎಂಬ ಪ್ರಶ್ನೆ ನಾಗರಿಕರದ್ದಾಗಿದೆ.

ಬ್ಯಾಂಕ್​ ಖಾತೆಗೆ ಆಧಾರ್​, ಪಾನ್​ ಲಿಂಕ್​ ಮಾಡಿಸಿಕೊಳ್ಳಲು ಗ್ರಾಮ ಒನ್​ ಕೇಂದ್ರಗಳ ಎದುರು ಹಾಗೂ ಬ್ಯಾಂಕ್​ಗಳಲ್ಲಿ ನೂಕುನುಗ್ಗಲು ಉಂಟಾಗಿದ್ದರೆ, ಕೋವಿಡ್​, ವಯಸ್ಸಹಜ, ಅಪಘಾತ ಸೇರಿ ವಿವಿಧ ಕಾಯಿಲೆಗಳಿಂದ ಬಿಪಿಎಲ್​ ಕಾರ್ಡ್​ ಮಾಲೀಕರು ಮೃತಪಟ್ಟಿದ್ದು, ಈ ಹೆಸರನ್ನು ಕಾರ್ಡ್​ನಿಂದ ತೆಗೆಸದೇ ಇರುವ ಕಾರಣ ಗ್ಯಾರಂಟಿ ಯೋಜನೆಯ ಹಣ ಪಡೆಯಲು ಸಾಧ್ಯವಾಗದೆ, ಮೃತಪಟ್ಟಿರುವ ಕುಟುಂಬದವರು ಹೆಸರು ತೆಗೆಸಲು ಆಹಾರ ಶಾಖೆಗೆ ಮುಗಿಬಿದ್ದಿದ್ದಾರೆ.

ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಫಲಾನುಭವಿಗಳ ದಾಖಲೆಗಳನ್ನು ಕ್ರೋಡಿಕರಿಸಿ ಯೋಜನೆ ಜಾರಿ ಮಾಡಿದ್ದರೆ ಸಾರ್ವಜನಿಕರು  ಬ್ಯಾಂಕ್​, ಗ್ರಾಮ ಒನ್​ ಕೇಂದ್ರಗಳಿಗೆ ಅಲೆದಾಡುವಂತಿರಲಿಲ್ಲ ನಾಗರಿಕರ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net