

ಗಂಗಾಧರ್ ಬೈರಾಪಟ್ಟಣ ರಾಮನಗರ
ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ಮತ್ತೊಂದು ರಣಹದ್ದು ಜೋಡಿ ಮರಿಯೊಂದಕ್ಕೆ ಜನ್ಮ ನೀಡಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ನಗರದ ಹೊರವಲಯದ ರಾಮದೇವರ ಬೆಟ್ಟದ ರಣಹದ್ದು ವನ್ಯಧಾಮದಲ್ಲಿ ಉದ್ದ ಕೊಕ್ಕಿನ ರಣಹದ್ದು ಜೋಡಿ ಕಳೆದ ವರ್ಷ ಒಂದು ಮರಿಗೆ ಜನ್ಮ ನೀಡಿತ್ತು. 20 ದಿನಗಳ ಹಿಂದೆ ಮತ್ತೊಂದು ಮರಿಗೆ ಜನ್ಮ ನೀಡಿದ್ದು, ಸುರಕ್ಷಿತವಾಗಿದೆ. ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದು ಸಂಕುಲದಲ್ಲಿ ಕಳೆದ ಎರಡು ವರ್ಷಗಳಲ್ಲಿ ಎರಡನೇ ಮರಿ ಜನಿಸಿರುವುದು ಹೊಸ ಭರವಸೆ ಹುಟ್ಟುಹಾಕಿದೆ.
ವರ್ಷಕ್ಕೆ ಒಂದೇ ಮೊಟ್ಟೆ
ರಣಹದ್ದುಗಳು ವರ್ಷಕ್ಕೆ ಒಂದೇ ಮೊಟ್ಟ ಇಟ್ಟು ಮರಿ ಮಾಡುತ್ತವೆ. ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಮೊಟ್ಟೆ ಇಟ್ಟು ಮರಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಮೊಟ್ಟೆಯಿಟ್ಟ ಸುಮಾರು 55-60 ದಿನಗಳಿಗೆ ಮೊಟ್ಟೆಯೊಡೆದು ಮರಿ ಆಚೆ ಬರುತ್ತದೆ. ಇದೀಗ ರಾಮದೇವರ ಬೆಟ್ಟದಲ್ಲಿ ಜೋಡಿ ರಣಹದ್ದು ಮರಿಗೆ ಜನ್ಮ ನೀಡಿದ್ದು, ಸುರಕ್ಷಿತವಾಗಿದೆ. ಪರಿಸರಸ್ನೇಹಿಯಾದ ಉದ್ದ ಕೊಕ್ಕಿನ ರಣಹದ್ದು ಸಂತತಿಯೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಬಂದಿದ್ದು, ಸಾವಿರ ಸಂಖ್ಯೆಯಲ್ಲಿದ್ದ ಇವುಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಆಗಿದ್ದು, ಇದೀಗ ಸತತ ಎರಡನೇ ವರ್ಷದಲ್ಲಿ ಮತ್ತೊಂದು ಮರಿ ಜನ್ಮ ಪಡೆದಿದೆ.
ಅಪರೂಪದ ಘಟನೆ
ರಣಹದ್ದು ಮರಿ ಮಾಡುವುದು ಅಪರೂಪ ಎನ್ನುವಂತೆ ಆಗಿದೆ. ರಾಮದೇವರ ಬೆಟ್ಟದಲ್ಲಿ ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ರಣಹದ್ದುಗಳು ಇದ್ದವು ಎನ್ನುವುದು ಹಿರಿಯರ ಮಾತು. ಕಾಲ ಕಳೆದಂತೆ ಇವುಗಳ ಸಂತತಿ ಕ್ಷೀಣಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡುವ ಪ್ರಕ್ರಿಯೆಯೂ ಅಪರೂಪ ಎನ್ನುವಂತಾಗಿತ್ತು. 2015-16ರಲ್ಲಿ ಜೋಡಿಯೊಂದು ಮರಿ ಮಾಡಿತ್ತು ಎನ್ನುವುದು ಬಿಟ್ಟರೆ ಅಂದಿನಿಂದ ಪ್ರತಿವರ್ಷ ಮೊಟ್ಟೆ ಇಟ್ಟರೂ ವಿವಿಧ ಕಾರಣಗಳಿಗಾಗಿ ಮರಿ ಆಗುವುದರಲ್ಲಿ ವಿಲವಾಗಿತ್ತು. ಸತತ 5 ವರ್ಷಗಳ ನಂತರ ಕಳೆದ ಸಾಲಿನಲ್ಲಿ ಒಂದು ಜೋಡಿ ಮರಿಗೆ ಜನ್ಮ ನೀಡಿತ್ತು. ಇದಾದ ನಂತರ ಈ ವರ್ಷವು ಸಹ ಮೊಟ್ಟೆ ಮರಿ ಆಗುವುದರಲ್ಲಿ ಸಲವಾಗಿದೆ.
ಸುರಕ್ಷತೆಗೆ ಕ್ರಮ
ಪ್ರತಿದಿನ ಆಹಾರ ಹುಡಕುತ್ತಾ ನೂರಾರು ಕಿಮೀ ಹಾರುವ ಸಾಮರ್ಥ್ಯವನ್ನು ರಣಹದ್ದುಗಳು ಹೊಂದಿವೆ. ಆದರೂ ಈ ಬಾರಿ ಅಪರೂಪಕ್ಕೆ ಎಂಬಂತೆ ಮರಿ ಆಗಿರುವುದರಿಂದ ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯವಾಗಿಯೇ ರಣಹದ್ದುಗಳಿಗೆ ಆಹಾರ ದೊರೆಯುವಂತೆ ಮಾಡಲು ವೈದ್ಯರಿಂದ ಅನುಮತಿ ಪಡೆದ ಮಾಂಸವನ್ನು ಸ್ಥಳದಲ್ಲಿಯೇ ಒದಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತಿಸಿದ್ದಾರೆ. ಅಲ್ಲದೆ, ನೀರು ಸಹ ಸ್ಥಳೀಯವಾಗಿಯೇ ದೊರೆಯುವಂತೆ ಮಾಡಲು ಇದ್ದ ನೀರಿನ ಹೊಂಡವನ್ನು ಶುಚಿಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ.
2015-16ನೇ ಸಾಲಿನಲ್ಲಿ ಜೋಡಿಯೊಂದು ಮರಿಗೆ ಜನ್ಮ ನೀಡಿತ್ತು. ಇದಾದ ನಂತರ ರಣ ಹದ್ದುಗಳು ಮರಿಯನ್ನೇ ಮಾಡಿರಲಿಲ್ಲ. ಕಳೆದ ವರ್ಷದಿಂದ ಸತತವಾಗಿ ಎರಡು ಮರಿಗಳು ಜನ್ಮ ಪಡೆದಿರುವುದು ಸಂತಸ ತಂದಿದೆ. ಈ ಪ್ರದೇಶವನ್ನು ಮತ್ತಷ್ಟು ರಣಹದ್ದು ಸ್ನೇಹಿ ತಾಣವನ್ನಾಗಿ ಮಾಡುವ ಮೂಲಕ ಅವುಗಳ ರಕ್ಷಣೆ ಮಾಡಬೇಕಿದೆ.
ಬಿ.ಶಶಿಕುಮಾರ್, ಕಾರ್ಯದರ್ಶಿ,ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್
ಬಹಳ ವರ್ಷಗಳ ನಂತರ ಅಳಿವಿನಂಚಿನಲ್ಲಿರುವ ರಣಹದ್ದು ಮರಿ ಮಾಡಿರುವುದು ಸಂತಸದ ವಿಚಾರ. ಮರಿ ಸುರಕ್ಷಿತವಾಗಿದೆ. ಇದರ ರಕ್ಷಣೆಗೆ ಮಾನವ ಸಂಪರ್ಕ ವಾಗದಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯವಾಗಿಯೇ ಆಹಾರ ದೊರೆಯುವಂತೆ ಮಾಡಲು ಚಿಂತಿಸಲಾಗಿದೆ.
ದೇವರಾಜು, ಡಿಸಿಎಫ್, ಪ್ರಾದೇಶಿಕ ವಿಭಾಗ, ರಾಮನಗರ