

ರಾಮನಗರ: ಮಕ್ಕಳಿಗೆ ಮದ್ಯಪಾನ ಮಾಡಿಸಿ ಮತ್ತಿನಲ್ಲಿ ಅವರು ಆಡುವ ಆಟಗಳನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ‘ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ’ ಶೀರ್ಷಿಕೆಯಡಿ ವಿಜಯವಾಣಿ ಸೋಮವಾರ (ಜೂ.7)ರಂದು ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ವಿಡಿಯೋ ಮೂಲದ ತನಿಖೆ ನಡೆಸಿದಾಗ ಮೂವರು ಕೃತ್ಯದಲ್ಲಿ ಭಾಗಿ ಆಗಿರುವುದು ಕಂಡು ಬಂದಿದೆ.
ಗಣೇಶ್, ಕರಿಯಪ್ಪ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿಯಿದ್ದು, ಆತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಸ್ಕೇಪ್ ಆಗಿರುವುದಾಗಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದು ಜಾಮೀನುರಹಿತ ಪ್ರಕರಣವಾಗಿದೆ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮವಾಗುತ್ತದೆ ಎಂದು ರಾಮನಗರ ಎಸ್ಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಕೋಡಿಹಳ್ಳಿಯ ಮರಳೀಪುರದ ಬಾಳೆತೋಟವೊಂದರ ತೋಟದ ಮನೆ ಬಳಿ 10 ವರ್ಷದೊಳಗಿನ 7 ಮಕ್ಕಳಿಗೆ ಬಾಡೂಟದ ಜತೆ ಮದ್ಯ ನೀಡಿ ಕುಡಿಯುವಂತೆ ಉತ್ತೇಜಿಸುತ್ತಿರುವ ದೃಶ್ಯವನ್ನೊಳಗೊಂಡ ವಿಡಿಯೋ ಸೇರಿ 3 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಕುರಿತು ‘ವಿಜಯವಾಣಿ‘ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದೀಗ ಅದರ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.