ಮರವೇರಿ ಕುಳಿತ ಚಿರತೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದ ಅರಣ್ಯ ಇಲಾಖೆ

Chirate3
Published on

 ಚನ್ನಪಟ್ಟಣ

ಹಲವು ದಿನಗಳಿಂದ ತಾಲೂಕಿನ ಇಗ್ಗಲೂರು ಭಾಗದಲ್ಲಿ ಉಪಟಳ ನೀಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಶನಿವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮಾ.1ರಂದು ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಮನೆ ಎದುರು ಆಟವಾಡುತ್ತಿದ್ದ ಬಾಲಕ ಗೌತಮ್ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು. ಇಷ್ಟೇ ಅಲ್ಲದೇ, ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಈ ಚಿರತೆ ಆತಂಕಕ್ಕೆ ಕಾರಣವಾಗಿತ್ತು.

ಅರಣ್ಯ ಇಲಾಖೆಗೂ ತಲೆಬಿಸಿಯಾಗಿದ್ದ ಈ ಚಿರತೆ ಸೆರೆ ಹಿಡಿಯಲು 15 ದಿನಗಳಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದಕ್ಕಾಗಿ ಮೈಸೂರಿನ ಸಂಜಯ್ ಗುಬ್ಬಿ ಮತ್ತು ತಂಡವನ್ನು ಕರೆಸಲಾಗಿತ್ತು. ಆ ತಂಡ ಸಿಸಿ ಕ್ಯಾಮರಾ ಬಳಸಿಕೊಂಡು ಚಿರತೆಯ ಚಲನವಲನದ ಬಗ್ಗೆ ಗಮನಹರಿಸಿದ್ದರು. ಇದರೊಂದಿಗೆ ಹೊಸ ಮಾದರಿಯ ಬೋನ್ ಇಡಲಾಗಿತ್ತು.

ಮರವೇರಿ ಕುಳಿತ ಚಿರತೆ

ಚಿರತೆ ಸಂಚರಿಸುವ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಶನಿವಾರ ಮುಂಜಾನೆ ಕುಂಟನಹಳ್ಳಿ ಗ್ರಾಮದ ಬಳಿ ಪ್ರತ್ಯಕ್ಷಗೊಂಡಿದ್ದ ಈ ಚಿರತೆ ಹಸು ಹಾಗೂ ಮೇಕೆ ಮೇಲೆ ವಿಫಲ ದಾಳಿ ನಡೆಸಿತ್ತು. ಅಲ್ಲಿಂದ ಇಗ್ಗಲೂರು ಗ್ರಾಮದ ಬಳಿಯ ಪೆಟ್ರೋಲ್ ಬಂಕ್ ಬಳಿ ಕಾಣಿಸಿದ್ದ ಚಿರತೆ ತದನಂತರ, ಅಲ್ಲಿಂದ ಕೆಲ ದೂರದಲ್ಲಿ 60 ಅಡಿ ಎತ್ತರದ ಮರವೊಂದರ ಮೇಲೆ ಕುಳಿತುಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಮರದ ಮೇಲಿದ್ದ ಚಿರತೆಯ ಸೆರೆಗೆ ಕಾರ್ಯಪ್ರವೃತ್ತರಾದರು.

ಮರದ ಸುತ್ತ ಬಲೆ ಹಾಕಿ ಚಿರತೆ ಸೆರೆಗೆ ಯತ್ನಿಸಲಾಯಿತು. ಆದರೆ, ಗಾಬರಿಗೊಂಡ ಚಿರತೆ ಮರದಿಂದ ಕೊಂಚವೂ ಕದಲಲಿಲ್ಲ. ನಂತರ, ಬನ್ನೇರುಘಟ್ಟದ ಪಶು ವೈದ್ಯಾಧಿಕಾರಿ ಡಾ. ಉಮಾಶಂಕರ್ ಅವರನ್ನು ಕರೆಸಿ ಮರದ ಮೇಲಿದ್ದ ಚಿರತೆಗೆ ಅರವಳಿಕೆ ಮದ್ದು ನೀಡಲಾಯಿತು. ಮದ್ದು ತಗುಲಿದ ಚಿರತೆ ಮರದ ಮೇಲಿಯೇ ಪ್ರಜ್ಞೆ ತಪ್ಪಿತ್ತು. ನಂತರ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟಕ್ಕೆ ರವಾನಿಸಲಾಯಿತು.

ಬಾಲಕನ ಮೇಲೆ ದಾಳಿ ಮಾಡಿದ ಚಿರತೆಯ ಸೆರೆಗೆ ವ್ಯಾಪಕ ಬಲೆ ಬೀಸಲಾಗಿತ್ತು. ಇದಕ್ಕಾಗಿ ವಿಶೇಷ ತಂಡ ಸಹ ಕರೆಸಲಾಗಿತ್ತು. ಶನಿವಾರ ಮರವೊಂದರ ಮೇಲೆ ಚಿರತೆ ಇರುವ ಮಾಹಿತಿ ಮೇರೆಗೆ ಚಿರತೆ ಸೆರೆಗೆ ಕ್ರಮಕೈಗೊಳ್ಳಲಾಗಿತ್ತು. ಅದರಂತೆ ಮರದ ಮೇಲಿದ್ದ ಚಿರತೆಗೆ ಗನ್ ಮೂಲಕ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿದೆ. 2.5 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು, ಆರೋಗ್ಯವಾಗಿದೆ.

ಕಿರಣ್ ಕುಮಾರ್, ಆರ್‌ಎಫ್ ಓ ಚನ್ನಪಟ್ಟಣ

ನಾಯಿಯಿಂದ ಲಾಕ್ ಆದ ಚಿರತೆ

ತಾಲೂಕಿನ ಇಗ್ಗಲೂರು ಬಳಿ ಸೆರೆಯಾಗಿರುವ ಚಿರತೆ ಲಾಕ್ ಆಗಲು ನಾಯಿಗಳ ಗುಂಪು ಕಾರಣ ಎಂಬುದು ವಿಶೇಷ. ನಾಯಿ ಎಂದರೆ ಚಿರತೆಗೆ ಬಲುಪ್ರಿಯ. ಚಿರತೆಗಳು ಭೇಟೆಗೆ ಇಷ್ಟಪಡುವುದೇ ನಾಯಿಗಳಿಗೆ. ಇಗ್ಗಲೂರು ಸಮೀಪದ ಪೆಟ್ರೋಲ್ ಬಂಕ್ ಬಳಿ ಶನಿವಾರ ಮುಂಜಾನೆ ಕಾಣಿಸಿಕೊಂಡ ಚಿರತೆಯನ್ನು ಕಂಡ ನಾಯಿಗಳ ಗುಂಪು ಚಿರತೆಯ ಮೇಲೆ ಪ್ರಬಲ ದಾಳಿ ನಡೆಸಿವೆ. ಇದರಿಂದ ವಿಚಲಿತಗೊಂಡ ಚಿರತೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಮರವೇರಿ ಕುಳಿತಿದೆ. ಅದು ಕೆಳಗೆ ಬರುವರೆಗೆ ಕಾಯ್ದ ಕಾರಣ ಚಿರತೆ ಇರುವುದು ಸಾರ್ವಜನಿಕರಿಗೆ ಗೊತ್ತಾಗಿದೆ. ಅದೇ ಚಿರತೆ ಸೆರೆಗೆ ಮೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net