

ಗಂಗಾಧರ್ ಬೈರಾಪಟ್ಟಣ ರಾಮನಗರ
ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬಹಿರಂಗ ಪ್ರಚಾರಕ್ಕೆ ಎರಡು ದಿನ ಅವಕಾಶವಿದ್ದು, ಈ ಎರಡೂ ದಿನಗಳು ಜಿಲ್ಲೆ ಸಂಪೂರ್ಣವಾಗಿ ರಾಜಕೀಯಮಯವಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಅಂತಿಮ ಹಂತದಲ್ಲಿ ತಾವು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುವ ಮೂಲಕ ಮತದಾರರ ಮನಮುಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕನಕಪುರದಲ್ಲಿ ಅಬ್ಬರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರ ಕನಕಪುರದಲ್ಲಿ ಈ ಬಾರಿಯ ಚಿತ್ರಣ ಸಂಪೂರ್ಣ ಬದಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಆರ್.ಅಶೋಕ್ ಸ್ಪರ್ಧೆ ಮಾಡಿರುವ ಕಾರಣದಿಂದಾಗಿ ಇಲ್ಲಿ ಚುನಾವಣೆ ಕಾವು ಪಡೆದುಕೊಂಡಿದೆ. ಒಂದು ಹಂತದಲ್ಲಿ ಬಿಜೆಪಿ ಚಾಣಕ್ಯ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಕನಕಪುರಕ್ಕೆ ಭೇಟಿ ನೀಡಿ ಆರ್.ಅಶೋಕ್ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಮೂಲಗಳ ಪ್ರಕಾರ ಅಮಿತ್ ಷಾ ಬರುವುದು ಅನುಮಾನ. ಆದರೆ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್.ಅಶೋಕ್ ಪರ ಕನಕಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದಾದ ನಂತರ ಸೋಮವಾರ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ರೋಡ್ ಶೋ ನಡೆಸುವ ಮೂಲಕ ಮತ ಕೇಳಲಿದ್ದಾರೆ.
ಎಚ್ಡಿಕೆ ಪ್ರಚಾರ: ನಾಮಪತ್ರ ಸಲ್ಲಿಕೆ ನಂತರ ಪತ್ನಿ ಹಾಗೂ ತಂದೆಯನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಿಟ್ಟಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಚನ್ನಪಟ್ಟಣದಲ್ಲಿ ರೋಡ್ ಶೋ ಮತ್ತು ಸಮಾವೇಶ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮೂಲಕ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ. ಈಗಾಗಲೇ ಎರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿರುವ ಎಚ್.ಡಿ.ದೇವೇಗೌಡರು ಪುತ್ರನ ಪರ ಮತಯಾಚಿಸಿ ಹೋಗಿದ್ದಾರೆ. ಇದರ ಜತೆಗೆ ಎಚ್ಡಿಕೆ ಪತ್ನಿ ಅನಿತಾ ಸಹ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡಿದ್ದಾರೆ.
ಇನ್ನು ಎಚ್ಡಿಕೆ ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಮಾಗಡಿಯ ಕುದೂರಿನಲ್ಲಿ ಸೋಮವಾರ ಅಭ್ಯರ್ಥಿ ಎ.ಮಂಜುನಾಥ್ ಪರ ಪ್ರಚಾರ ನಡೆಸಲಿದ್ದು, ರಾಮನಗರದಲ್ಲಿಯೂ ಪುತ್ರ ನಿಖಿಲ್ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಕೊನೇ ಹಂತದ ಕಸರತ್ತು
ಸೋಮವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಬೇಸಿಗೆ ಮಳೆ ಕೊಂಚ ತಂಪು ತಂದಿರುವ ಕಾರಣ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮತಬೇಟೆ ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಂತಾದವರು ಪ್ರಚಾರ ನಡೆಸಿರುವುದು ಬಿಜೆಪಿ ಬಲ ಹೆಚ್ಚಿಸಿದೆ.
ಅಂತಿಮವಾಗಿ ಭಾನುವಾರ ಮತ್ತು ಸೋಮವಾರ ಜಿಲ್ಲೆಯ ಚುನಾವಣೆ ಕಣ ಆರೋಪ ಮತ್ತು ಪ್ರತ್ಯಾರೋಪಗಳಿಗೆ ವೇದಿಕೆ ನಿರ್ಮಿಸಲಿದೆ.