

ಕೈಲಾಂಚ:(ರಾಮನಗರ) ಮಹಿಳೆಯನ್ನು ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ಎಸೆದುಹೋಗಿರುವುದು ಹೋಬಳಿಯ ಅಚ್ಚಲುದೊಡ್ಡಿ ಗ್ರಾಮದ ಬಳಿ ಇರುವ ಫ್ಯಾಕ್ಟರಿ ಕಾಲನಿ ಬಳಿಯ ಗುರುವಾರ ಸಂಜೆ ನಡೆದಿದೆ.
ಕಾಲನಿ ನಿವಾಸಿ ಕೆಂಪಮ್ಮ (49) ಮೃತ.
ಕೆಂಪಮ್ಮ ಹಸುಗಳನ್ನು ಸಾಕಿದ್ದು, ಜತೆಗೆ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದರು. ಅಚ್ಚಲು ಫ್ಯಾಕ್ಟರಿ ಕಾಲನಿ ಬಳಿ ಸೇನಾಪತಿ ವೈಟ್ಲೆ ಸಂಸ್ಥೆಗೆ ಸೇರಿದ ಖಾಲಿ ಜಾಗದಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದರು. ಗುರುವಾರ ಸಂಜೆ ಜಾನುವಾರಗಳನ್ನು ಮನೆಗೆ ಕರೆತರಲು ಹೋಗಿದ್ದಾಗ ದುಷ್ಕರ್ಮಿಗಳು ಕೆಂಪಮ್ಮಳನ್ನು ಕೊಲೆ ಮಾಡಿ ಮೂಟೆಯಲ್ಲಿ ತುಂಬಿ ಅರ್ಕಾವತಿ ನದಿ ಪಕ್ಕದ ಲಾಳದ ಕಡ್ಡಿಗಳು ಬೆಳೆದಿರುವ ಜಾಗದಲ್ಲಿ ಎಸೆದು ಹೋಗಿದ್ದಾರೆ. ಸಂಜೆ 6 ಗಂಟೆಯಾದರೂ ಕೆಂಪಮ್ಮ ಮನೆಗೆ ಬಾರದಿದ್ದಾಗ, ಮನೆಯವರು ಹಸುಗಳು ಮೇಯುತ್ತಿದ್ದ ಜಾಗಕ್ಕೆ ಹೋಗಿ ನೋಡಿದಾಗ ಹಸುಗಳು ಮೇಯುತ್ತಿದ್ದು, ಕೆಂಪಮ್ಮ ಕಾಣದಿದ್ದಾಗ, ಸ್ಥಳೀಯರೊಂದಿಗೆ ಅರ್ಕಾವತಿ ನದಿ ಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ. ರಾತ್ರಿ 8 ಗಂಟೆ ಹೊತ್ತಿಗೆ ಅರ್ಕಾವತಿ ನದಿಯ ಹಳ್ಳದ ಪಕ್ಕದಲ್ಲಿ ಮೂಟೆಯೊಂದು ಕಂಡು ತೆರೆದು ನೋಡಿದಾಗ ಕೆಂಪಮ್ಮ ಶವ ಪತ್ತೆಯಾಗಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.