ಕೆಂಪೇಗೌಡರ ರಹಸ್ಯ ಕೋಟೆಯ

Kailancha-Ph-02-Gramayana- Kungal Story- Photo _ Kungal-13-8-2023
Published on

ತಾಣ ಹತ್ತಾರು ಹಳ್ಳಿಗಳಿಗೆ ಕೂನಗಲ್ ಕಂದಾಯ ಗ್ರಾಮ

ಚೋಳರು, ಪಾಳೆಗಾರರ ಭಾವೈಕ್ಯತೆಯ ನೆಲೆಬೀಡು

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಚೋಳರು, ರಾಜ ಮಹಾರಾಜರು, ಪಾಳೆಗಾರರು, ಕೆಂಪೇಗೌಡರ ಆಡಳಿತ ನಡೆಸಿದ ಸರ್ವಜನಾಂಗದ ಭಾವೈಕ್ಯತೆಯ ನೆಲೆಬೀಡು, ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶ ಹಬ್ಬದಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದ ಕೀರ್ತಿ ಕೂನಗಲ್‌ಗೆ ಸಲ್ಲುತ್ತದೆ.

ಹೌದು.. ರಾಮನಗರ ಜಿಲ್ಲಾ ಕೇಂದ್ರದಿಂದ 5 ಕಿ.ಮಿ. ಅಂತರದಲ್ಲಿ ಅರ್ಕಾವತಿ ನದಿಯ ದಂಡೆಯ ಬೆಟ್ಟದ ಬುಡದಲ್ಲಿ ಪ್ರಕೃತಿ ವನಸಿರಿ ಮಧ್ಯೆ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟು ಸರ್ವ ಜನರ ಒಳಿತಿಗಾಗಿ ನಾನಿದ್ದೇನೆ ಎಂದು ಸಾರುತ್ತಿರುವಂತಿದೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿರುವ ಕೂನಗಲ್ ಗ್ರಾಮ.

ಗ್ರಾಮದಲ್ಲಿ ಪುರಾತನ ದೇವಾಲಯಗಳಿವೆ. ಬುದ್ಧರ ಕಾಲ, ಶಾತವಾಹನರು, ಚೋಳರು ಪ್ರತಿಷ್ಠಾಪಿಸಿದ ದೇವಾಲಯಗಳೂ ಕಾಣಸಿಗುತ್ತದೆ. ಹಲವು ಜಾತಿ, ಸಮುದಾಯದವರು ಇಲ್ಲಿದ್ದಾರೆ. ಮೊದಲಿನಿಂದಲೂ ಹಿಂದು-ಮುಸ್ಲಿಮರು ಇಲ್ಲಿ ಸೌಹಾರ್ದವಾಗಿ ನೆಲೆಸಿದ್ದಾರೆ. ಪ್ರಾಥಮಿಕ ಪ್ರೌಢಶಾಲೆಗಳು ಗ್ರಾಮದಲ್ಲಿವೆ. ಶಾಲೆಯಲ್ಲಿ ರಂಗ ಮಂದಿರ ನಿರ್ಮಾಣ ಮಾಡಿದ್ದು, ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅವರ ಹೆಸರಿಟ್ಟಿದ್ದಾರೆ. ಅಕ್ಕಪಕ್ಕದ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿನ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ಗ್ರಾಮದಲ್ಲಿ 150ಕ್ಕೂ ಹೆಚ್ಚಿನ ಕುಟುಂಬಗಳಿದ್ದು, 750ಕ್ಕೂ ಜನ ಶಾಂತಿ ಸೌಹಾರ್ದದ ಜೀವನ ನಡೆಸುತ್ತಿರುವ ಮಾದರಿ ಗ್ರಾಮವಾಗಿದೆ.

ಪಂಚಾಯಿತಿ ಕೇಂದ್ರವಾಗಿ ಪಟೇಲರು, ಶಾನುಭೋಗರ ಆಡಳಿತ ಕೇಂದ್ರವಾಗಿ, ಮೈಸೂರು ಸಂಸ್ಥಾನದ ಪ್ರಮುಖ ಗ್ರಾಮವಾಗಿ ಜತೆಗೆ ರಾಮನಗರ ತಾಲೂಕಿನ ಮೂಲ ಕಂದಾಯ ಗ್ರಾಮವಾಗಿಯೂ ಕೂನಗಲ್ ಹೆಸರು ಮಾಡಿದೆ. ಈಗಲೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಕಂದಾಯ ಗ್ರಾಮ ಇದಾಗಿದೆ.

ಗ್ರಾಮದಲ್ಲಿರುವ ದೇಗುಲಗಳು:
ಚೋಳರ ಕಾಲದ ಇತಿಹಾಸ ಸಾರುವ ಪುರಾತನ ವರದರಾಜಸ್ವಾಮಿ, ರಂಗನಾಥಸ್ವಾಮಿ, ಮಾರಮ್ಮ, ಕೂನಮ್ಮ, ಪಂಚಮುಖಿ ಗಣೇಶ ದೇವಾಲಯ, ಬೆಟ್ಟದ ಮೇಲೆ ಆಂಜನೇಯ ದೇಗುಲ ಇದೆ. ಪ್ರತಿ ರಥಸಪ್ತಮಿಯಂದು ರಥೋತ್ಸವ ವೈಭವದಿಂದ ನಡೆಯುತ್ತದೆ. ಬೆಟ್ಟದ ಇನ್ನೊಂದು ಬದಿಯಲ್ಲಿ ಬಾಬಯ್ಯ ಮಸೀದಿ ಇದ್ದು, ಡಿಸೆಂಬರ್‌ನಲ್ಲಿ ಮುಸ್ಲಿಂ ಹಬ್ಬ ನಡೆಸುತ್ತಾರೆ.

ಗ್ರಾಮದಲ್ಲಿ ನೆಲೆನಿಂತಿರುವವರು:
ಬ್ರಾಹ್ಮಣರು, ವೈಷ್ಣವರು, ಒಕ್ಕಲಿಗರು, ತಿಗಳರು, ಕುರುಬರು, ಸವಿತಾ ಸಮಾಜ, ಪರಿಶಿಷ್ಟ ಜಾತಿ, ಮುಸ್ಲಿಂ.

ಬೆಟ್ಟದಲ್ಲಿ ಪ್ರಮುಖ ಸ್ಥಳಗಳು:
ಬೆಟ್ಟದ ಮೇಲೆ ಆಂಜನೇಯ ವಿಗ್ರಹ ಕೆತ್ತಲಾಗಿತ್ತು. ಕಳೆದ 25, 30 ವರ್ಷಗಳ ಹಿಂದೆ ಈ ದೇವಾಲಯವನ್ನು ಸಮಾಜ ಸೇವಕ ಪುಟ್ಟಮಾಸ್ತಿಗೌಡ ಎಂಬುವರು ನಿರ್ಮಿಸಿದರಂತೆ. ಗ್ರಾಮಸ್ಥರ ಸಹಕಾರದಲ್ಲಿ ದೇವಾಲಯ ಮಾತ್ರವಲ್ಲದೆ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದರಂತೆ. ಇದೇ ಸ್ಥಳದ ಇನ್ನೊಂದು ಕಡೆ ಬಾಬಯ್ಯನ ಗುಡಿ ಇದೆ.

ಕೂನಗಲ್ ಹೆಸರು
ಕೂನಗಲ್ ಗ್ರಾಮದ ಪಕ್ಕದಲ್ಲಿ ದೊಡ್ಡ ಕಲ್ಲು ಬಾಗಿದ ರೀತಿಯಲ್ಲಿ ಇದೆ. ಇದು ಗ್ರಾಮದ ಕುರಿತಾದ ದಂತಕತೆ ಹೇಳುತ್ತದೆ. ಕೂನಮ್ಮ ಮತ್ತು ಆಕೆಯ ಅಣ್ಣ ಒಟ್ಟಿಗೆ ವಾಸವಿದ್ದರು. ಚಿಕ್ಕ ವಯಸ್ಸಿನಲ್ಲಿ ಅಣ್ಣ ಮನೆ ಬಿಟ್ಟು ಬಹು ದೂರ ಹೋದ. ಕಾಲಾಂತರದಲ್ಲಿ ಕೂನಮ್ಮ ಕುಟುಂಬ ಬೇರೆಡೆಗೆ ಬಂದು ನೆಲೆಸಿತು. ಕುಟುಂಬವು ವಯಸ್ಸಿಗೆ ಬಂದ ಮಗಳಿಗೆ ಗಂಡು ಹುಡುಕಿ ಮದುವೆ ಮಾಡುತ್ತಾರೆ. ಆದರೆ ಆಕೆಯನ್ನು ಮದುವೆಯಾದ ಹುಡುಗ ಚಿಕ್ಕಂದಿನಲ್ಲಿ ಮನೆಬಿಟ್ಟು ಅಣ್ಣನೇ ಎಂದು ಆಕೆಗೆ ತಿಳಿಯುತ್ತದೆ. ‘ನಾನು ದೊಡ್ಡ ತಪ್ಪು ಮಾಡಿದ್ದೇನೆ’ ಎಂದು ಕೂನಮ್ಮ ತಡ ಮಾಡದೆ ತನ್ನ ತಪ್ಪಿಗೆ ಪ್ರಾಯಶ್ಚಿತವೆಂದು ‘ನಾನು ಕಲ್ಲಾಗಿ ಹೋಗುತ್ತೇನೆ’ ಎಂದು ಕೂನಗಲ್ ಗ್ರಾಮಕ್ಕೆ ಬಂದು ಕಲ್ಲಾಗಿ ಹೋದಳಂತೆ.
ಬಾಗಿರುವ ಕಲ್ಲಿನ ಬೆಟ್ಟದ ಬುಡದಲ್ಲಿ ಈಗಲೂ ಕೂನಮ್ಮ ದೇವಾಲಯವಿದೆ. ಅಲ್ಲಿ ಪ್ರತಿದಿನ ಪೂಜೆ ನಡೆಸುತ್ತಾರೆ. ಜತೆಗೆ ಪ್ರತಿ ವರ್ಷ ಗ್ರಾಮಸ್ಥರು ಅನ್ನದಾನ ನಡೆಸುತ್ತಾರೆ. ಮೊದಮೊದಲು ಗೂನಗಲ್ ಎಂದು ಕರೆಯುತ್ತಿದ್ದರು. ಕಾಲಾಂತರದಲ್ಲಿ ಕೂನಗಲ್ ಆಯಿತು ಎಂದು ಹಿರಿಯರು ಹೇಳುತ್ತಾರೆ.

ರಹಸ್ಯ ದುರ್ಗವಾಗಿ ಆಡಳಿತ
ಕೂನಗಲ್ ಗ್ರಾಮಕ್ಕೆ ಬೆಟ್ಟ ಹೊಂದಿಕೊಂಡಂತಿದೆ. ಕೆಂಪೇಗೌಡರು ತಮ್ಮ ಅವಧಿಯಲ್ಲಿ ರಹಸ್ಯ ದುರ್ಗವಾಗಿ ಇದನ್ನು ಬಳಸುತ್ತಿದ್ದರಂತೆ. ಕೆಲವು ಸಂದರ್ಭದಲ್ಲಿ ಇಲ್ಲಿಂದಲೇ ಆಡಳಿತ ನಡೆಸುತ್ತಿದ್ದರು ಎಂದು ಹೇಳುತ್ತಾರೆ. ಬೆಟ್ಟದ ಮೇಲಿನ ಕೋಟೆ ಕೊತ್ತಲು ಇತಿಹಾಸ ಸಾರುವ ಸ್ಥಳಗಳು ರಾಜ ಮಹಾರಾಜರು, ಸಾಮಂತರು, ಪಾಳೇಗಾರರ ಆಡಳಿತವನ್ನು ನೆನಪಿಸುತ್ತವೆ. ಬೆಟ್ಟ ಬಹಳ ಎತ್ತರವಾಗಿದೆ. ಕೋಟೆ ಮೇಲೆ ನಿಂತು 360 ಡಿಗ್ರಿ ಕೋನದಲ್ಲಿ ನೋಡಿದರೆ 20 ಕಿ.ಮೀ. ದೂರದವರೆಗೂ ಸ್ಥಳ ವೀಕ್ಷಣೆ ಮಾಡಬಹುದಾಗಿದೆ. ಈ ಕಾರಣದಿಂದಲೇ ಕೆಂಪೇಗೌಡರು ಈ ಸ್ಥಳವನ್ನು ರಹಸ್ಯ ತಾಣವಾಗಿ ಮಾಡಿಕೊಂಡು ಕೋಟೆ ಸುತ್ತಲೂ ಸೈನ್ಯ ಇಟ್ಟು ವೈರಿಗಳನ್ನು ಸದೆ ಬಡಿಯುತ್ತಿದ್ದರು ಎನ್ನಲಾಗುತ್ತದೆ.

ಅರ್ಕಾವತಿ :
ಅರ್ಕಾವತಿ ನದಿಯ ಜುಳು ಜುಳು ನಿನಾದ ಗ್ರಾಮದ ಮನೆಗಳಿಗೆ ಕೇಳುತ್ತದೆ. ಈ ನದಿ ದಂಡೆಯಲ್ಲೇ ಗ್ರಾಮ ಇರುವ ಕಾರಣ ಗ್ರಾಮದ ಹಸಿರು ಚಿತ್ರಣಕ್ಕೆ ಮುನ್ನುಡಿ ಬರೆದಿದೆ. ಕುಡಿಯುವ ನೀರಿನ ಬರ ಇಂಗಿಸಿದೆ.

ಅಭಿವೃದ್ಧಿಗೆ ಪೂರಕ
ಗ್ರಾಮ ಇತಿಹಾಸ ಕಾಲದಿಂದ ಇದ್ದರೂ ಇನ್ನೂ ನಾಡಹೆಂಚಿನ ಮನೆಗಳು ಕಾಣಸಿಗುತ್ತವೆ. ಅಭಿವೃದ್ಧಿ ಬಹಳಷ್ಟು ಆಗಬೇಕಿದೆ. ಗ್ರಾಮ ಪಂಚಾಯಿತಿ ಎಲ್ಲ ಗ್ರಾಮಗಳಿಗಿಂತ ಒಂದು ಕೈ ಮೇಲಾಗಿ ಮೂಲ ಸೌಲಭ್ಯ ಕಲ್ಪಿಸಿದೆ. ಆದರೆ ಜನರ ಆರ್ಥಿಕ ಸ್ಥಿತಿ ಮೇಲೆತ್ತುವ ಕಾರ್ಯ ಆಗಬೇಕಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೂನಗಲ್ ಬೆಟ್ಟವನ್ನು ಅಭಿವೃದ್ಧಿ ಪಡಿಸಿದರೆ ಸ್ಥಳೀಯರಿಗೆ ಒಂದಷ್ಟು ಆರ್ಥಿಕ ಶಕ್ತಿ ಸಿಗಬಹುದು. ಇದು ಗ್ರಾಮದ ಅಭಿವೃದ್ಧಿಗೆ ಪೂರಕವಾಗಬಹುದು.

ಕೂನಗಲ್ ಹೆಸರಿಗೆ ಚಿಕ್ಕ ಗ್ರಾಮ. ಆದರೆ, ಈ ಗ್ರಾಮ ಇತಿಹಾಸವನ್ನು ಇಟ್ಟುಕೊಂಡಿದೆ. ಕೆಂಪೇಗೌಡರು ಆಡಳಿತ ನಡೆಸಿದ್ದರು ಎಂದು ಬೆಟ್ಟದ ಕೋಟೆಗಳೇ ಸಾಕ್ಷಿ ಹೇಳುತ್ತವೆ. ಇಲ್ಲಿನ ಇತಿಹಾಸ ತಿಳಿಯಲು ಪುರಾತತ್ವ ಇಲಾಖೆ ಇನ್ನಾದರೂ ಮುಂದಡಿ ಇಡಬೇಕಿದೆ.
ಬೈರೇಗೌಡ, ಇತಿಹಾಸ ಸಂಶೋಧಕ

=

ಕೂನಗಲ್ ಗ್ರಾಮ ಸಮನ್ವಯದ ಸಂಕೇತವಾಗಿದೆ. ಎಲ್ಲ ಜಾತಿ, ಧರ್ಮಗಳು ಒಟ್ಟಾಗಿ ಗ್ರಾಮದಲ್ಲಿ ಜೀವನ ಕಟ್ಟಿಕೊಂಡು ಬದುಕು ನಡೆಸುತ್ತಿದ್ದೇವೆ. ಹಬ್ಬ ಹರಿದಿನಗಳು, ಜಾತ್ರೆ ರಥೋತ್ಸವ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲ ಗ್ರಾಮಗಳ ಜನರು, ಗ್ರಾಮಸ್ಥರ ಸಹಕಾರದಲ್ಲಿ ವೈಭವದಿಂದ ನಡೆಯುತ್ತವೆ. ಇಂತಹ ಐತಿಹಾಸಿಕ ಗ್ರಾಮದಲ್ಲಿ ಜನಿಸಿರುವುದೇ ಪುಣ್ಯ.
ರಾಜೇಶ್, ಕೂನಗಲ್ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net