

ಕುದೂರು (ರಾಮನಗರ)
ದೇವಾಲಯವೊಂದರ ಕಳವು ಪ್ರಕರಣದ ಬೆನ್ನತ್ತಿದ ಪೊಲೀಸರು ಮೂವರನ್ನು ಬಂಧಿಸಿ 1.40 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ಪ್ರಜ್ವಲ್, ಕೆ.ಆರ್.ಪುರಂ ನಿವಾಸಿ ಪ್ರಸನ್ನ ಹಾಗೂ ಮಹದೇವಪುರದ ಮುತ್ತುರಾಜ್ ಬಂಧಿತರು.
ಹೋಬಳಿಯ ಮಾದಿಗೊಂಡನಹಳ್ಳಿ ಲಕ್ಷ್ಮೀ ದೇವಾಲಯದ ಕಳವು ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ, ಡಿವೈಎಸ್ಪಿ ಟಿ.ವಿ.ಸುರೇಶ್ ಮಾರ್ಗದರ್ಶನದಲ್ಲಿ ಮಾಗಡಿ ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್ ಮತ್ತು ಕುದೂರು ಠಾಣೆ ಸಿಪಿಐ ಎ.ಪಿ.ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ತಂಡ ಮೂವರನ್ನು ಬಂಧಿಸಿದೆ ಎಂದು ಎ.ಪಿ.ಕುಮಾರ್ ತಿಳಿಸಿದರು.
ಆರೋಪಿಗಳ ಬಂಧನದಿಂದ ಕುದೂರು ಠಾಣಾ ವ್ಯಾಪ್ತಿಯ 2, ಸಾತನೂರು 1 ಹಾಗೂ ಟೌನ್ ಠಾಣಾ ವ್ಯಾಪ್ತಿಯ 1, ತುಮಕೂರು ಜಿಲ್ಲಾ ಕ್ಯಾತ್ಸಂದ್ರ ಠಾಣಾ ವ್ಯಾಪ್ತಿಯ 3 ಪ್ರಕರಣ ಸೇರಿ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರ ಬಳಿಯಿದ್ದ 22 ಗ್ರಾಂ ಚಿನ್ನದ ತಾಳಿ, 75 ಗ್ರಾಂನ ಬೆಳ್ಳಿಯ ಲಕ್ಷ್ಮೀ ವಿಗ್ರಹ ಹಾಗೂ 25,800 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.