

ಕೆಪಿಆರ್ಎಸ್, ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ನಿರ್ಧಾರ ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಕಾಮಗಾರಿ
ರಾಮನಗರ
ನೈಸ್ ಸಂಸ್ಥೆ ಭ್ರಷ್ಟಾಚಾರ ಎಸಗುತ್ತಿದೆ ಹಾಗೂ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರಾಂತ ರೈತ ಸಂ (ಕೆಪಿಆರ್ಎಸ್) ಮತ್ತು ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿಯು ಆಗಸ್ಟ್ 1 ರಂದು ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.
ಸಂಘದ ಉಪಾಧ್ಯಕ್ಷ ಎಂ.ವೆಂಕಟಾಚಲಯ್ಯ ಅವರು ರಾಮನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1997ರಲ್ಲಿ ನೈಸ್ ಸಂಸ್ಥೆಗೆ ಬೆಂಗಳೂರಿನಿಂದ ಮೈಸೂರಿನ ತನಕ ಸುಮಾರು 152 ಗ್ರಾಮಗಳ ಸಾವಿರಾರು ಎಕರೆ ರೈತರ ಭೂಮಿಯನ್ನು ಕೆಐಎಡಿಬಿ ಮೂಲಕ ಹೆದ್ದಾರಿ ನಿರ್ಮಾಣಕ್ಕೆ ವಶಪಡಿಸಿಕೊಂಡು ಹಸ್ತಾಂತರ ಮಾಡಲಾಗಿದೆ.
ಆದರೆ 27 ವರ್ಷ ಕಳೆದರೂ ನೆಲಮಂಗಲ ರಸ್ತೆಯಿಂದ ಹೊಸೂರು ರಸ್ತೆಯವರೆಗೆ ರಸ್ತೆ ನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಉಳಿದ ಕಡೆ ಅಭಿವೃದ್ಧಿ ಮಾಡಿಲ್ಲ. ಜತೆಗೆ, ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಕಾಮಗಾರಿಗಳನ್ನು ನಡೆಸಿ ಅವ್ಯವಹಾರದಲ್ಲಿ ಕಂಪನಿ ತೊಡಗಿದೆ.
ಸಂಸ್ಥೆಯ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ನೇಮಿಸಿದ್ದ ಸದನ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಈ ಪ್ರಕಾರ ಸಾವಿರಾರು ಎಕರೆ ಭೂ ಕಬಳಿಕೆ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದೆ. ಆದರೂ ಯಾವುದೇ ಸರ್ಕಾರ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಸಂಸ್ಥೆ ಕಾನೂನು ಮೀರಿ ರೈತರ ಭೂಮಿ ವಶಪಡಿಸಿಕೊಂಡಿದೆ. ಗೂಂಡಾಗಿರಿ ಮತ್ತು ಪೊಲೀಸರನ್ನು ಬಳಸಿ ರೈತರಿಗೆ ತೊಂದರೆ ನೀಡುತ್ತಿದೆ. ಕಂಪನಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ. ರೈತರನ್ನು ಪೊಲೀಸ್ ಠಾಣೆ ಮತ್ತು ಕೋರ್ಟ್ಗೆ ಅಲೆದಾಡುವಂತೆ ಮಾಡಿದೆ ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ಎಚ್.ನಾರಾಯಣಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಶಶಿಕುಮಾರ್, ದಿನೇಶ್ ಆರಾಧ್ಯ, ರಾಮಣ್ಣ, ಎಸ್. ದೇವರಾಜು, ಹನುಮಂತಯ್ಯ, ರುಕುಮಾರ್, ಬಸವರಾಜು, ಸಣ್ಣರಂಗಯ್ಯ ಮುಂತಾದವರು ಇದ್ದರು.
ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ನೈಸ್ ರಸ್ತೆಯ 1 ಕಿ.ಮೀ. ಅಂತರದಲ್ಲೇ ಹಾದು ಹೋಗಿದೆ. ಈಗ ಈ ಭೂಮಿ ಅವಶ್ಯಕತೆ ಇಲ್ಲ. ಹಾಗಿದ್ದರೂ ಜಾಗ ಕಬಳಿಸಲು ಹುನ್ನಾರ ನಡೆಸಿರುವ ಸಂಸ್ಥೆ ವಾಮ ಮಾರ್ಗದಲ್ಲಿ ಸಾಗುತ್ತಿದ್ದು 1998ರ ದರ ನೀಡುತ್ತೇವೆ ಎನ್ನುವುದು ಸರಿಯಲ್ಲ. ಇದು ವೈಜ್ಞಾನಿಕವಲ್ಲ. ಭೂಮಿಯ ಬೆಲೆ ಹಿಂದೆ ಇದ್ದ ಬೆಲೆಗಿಂತ 50 ಪಟ್ಟು ಹೆಚ್ಚಾಗಿದೆ. ರೈತರಿಗೆ ಇದರಿಂದ ಮೋಸವಾಗುತ್ತದೆ. ಕೂಡಲೇ ರೈತರ ಜಮೀನು ವಾಪಸ್ ನೀಡಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಅನಿವಾರ್ಯ.
ಸೋಮೇಶ್ವರ, ಉಪಾಧ್ಯಕ್ಷ, ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ