ರಾಮನಗರ ಕೂನಗಲ್ ಬೆಟ್ಟಕ್ಕೆ ಬೇಕಿದೆ ಕಾಯಕಲ್ಪ

Kailancha-Ph-02 -Kungal Betta Story-Kunamma Betta - 28-1-2024
Published on

ವಿಭೂತಿಕೆರೆ ಶಿವಲಿಂಗಯ್ಯ. ಕೈಲಾಂಚ

ಸುತ್ತಲೂ ಸುಂದರ ವನಸಿರಿ, ಬೆಟ್ಟ ಗುಡ್ಡಗಳು, ಪ್ರಮುಖವಾಗಿ ದೇವಾಲಯಗಳ ಬೀಡಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುವ ಕೂನಗಲ್ ಬೆಟ್ಟ ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕೂನಗಲ್ ಬೆಟ್ಟ ಜಿಲ್ಲಾ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೂನಗಲ್ ಬೆಟ್ಟವೂ ಒಂದಾಗಿದೆ. ಕೂನಗಲ್ ಗ್ರಾಮದ ಬೆಟ್ಟದಲ್ಲಿ ಪುರಾತನ ದೇವಾಲಯಗಳಿವೆ. ಅರ್ಕಾವತಿ ನದಿ ತಟದಲ್ಲಿರುವ ಬೆಟ್ಟವು ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಂಥ ಬೆಟ್ಟ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಅಭಿವೃದ್ಧಿ ಕಂಡಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಇತ್ತೀಚೆಗೆ ಶಾಲಾ ಮಕ್ಕಳು ಬೆಟ್ಟದ ಸೌಂದರ್ಯ ವೀಕ್ಷಿಸಲು ಬೆಂಗಳೂರಿನಿಂದ ರಾಮನಗರಕ್ಕೆ ಪ್ರವಾಸ ಮಾಡಲು ಆರಂಭಿಸಿದ್ದಾರೆ. ರಜಾ ದಿನಗಳಲ್ಲಂತೂ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಕೂನಗಲ್ ಬೆಟ್ಟದಲ್ಲಿ ಹಸಿರು ಮರಗಳು, ಚಿಕ್ಕ ಹಾಗೂ ಹೆಬ್ಬಂಡೆಗಳು, ದೇವಾಲಯ, ಸೊಣೆ ಮುಂತಾದ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಐತಿಹಾಸಿಕ ಮಹತ್ವ

ನಾಡಪ್ರಭು ಕೆಂಪೇಗೌಡರು ತಮ್ಮ ಆಳ್ವಿಕೆಯಲ್ಲಿ ಈ ಬೆಟ್ಟವನ್ನು ರಹಸ್ಯ ದುರ್ಗವಾಗಿ ಆಡಳಿತ ಕೇಂದ್ರ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೆಟ್ಟದ ಮೇಲೆ ಇರುವ ಅವಶೇಷಗಳು ಕೋಟೆ, ಕೊತ್ತಲ ಇತಿಹಾಸ ಸಾರುವ ಸ್ಥಳಗಳು, ರಾಜ ಮಹಾರಾಜರು, ಸಾಮಂತರು, ಪಾಳೇಗಾರರ ಆಡಳಿತವನ್ನು ನೆನಪಿಸುತ್ತವೆ.

ಕೂನಗಲ್ ಬೆಟ್ಟ ಎತ್ತರವಾಗಿದ್ದು, ಕೋಟೆ ಮೇಲೆ ನಿಂತು ನೋಡಿದರೆ ಸುಮಾರು 20 ಕಿ.ಮೀ. ದೂರದವರೆಗೂ ವೀಕ್ಷಣೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡರು ಈ ಸ್ಥಳವನ್ನು ರಹಸ್ಯ ತಾಣವಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಇಲ್ಲಿರುವ ಕಲ್ಲಿನ ಬಂಡೆಯೊಂದು ಬಾಗಿದ ರೀತಿಯಲ್ಲಿದ್ದು ಕೂನಮ್ಮ ಬಂಡೆ ಎಂದೇ ಹೆಸರಾಗಿದೆ. ಬೆಟ್ಟದ ಕೆಳ ಭಾಗದಲ್ಲಿ ಕೂನಮ್ಮ ದೇವಾಲಯ ಕೂಡ ಇದೆ. ಜತೆಗೆ ಚೋಳರ ಕಾಲದ ದೇವಾಲಯಗಳು ಬೆಟ್ಟದ ಕೆಳಗಿನ ಗ್ರಾಮದಲ್ಲಿವೆ.

ಏನೇನು ಅಭಿವೃದ್ಧಿ ಬೇಕಿದೆ?

ಬೆಟ್ಟ ಹತ್ತಲು ಉತ್ತಮ ರಸ್ತೆ, ಕಲ್ಲಿನ ಬಂಡೆ ಹತ್ತುವ ಜಾಗದಲ್ಲಿ ಮೆಟ್ಟಿಲು, ಬೆಟ್ಟದ ರಸ್ತೆ ಆಸುಪಾಸಿನಲ್ಲಿ ವಿಶ್ರಾಂತಿಗೆ ಜಾಗ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ನಿರ್ಮಾಣ, ಹಸಿರು ಹೆಚ್ಚಿಸಲು ಗಿಡ ಮರ ಬೆಳೆಸುವಿಕೆ, ಅಕ್ಕತಂಗಿಯರ ಸೊಣೆ ನೋಡುವ ಜಾಗ ಅಭಿವೃದ್ಧಿ, ಬೆಟ್ಟದ ತುತ್ತ ತುದಿಯಲ್ಲಿ ಹಾಗೂ ಕಡಿದಾದ ಸ್ಥಳದಲ್ಲಿ ಭದ್ರತೆಗಾಗಿ ಕಬ್ಬಿಣದ ಗ್ರಿಲ್ ಅಳವಡಿಕೆ, ಬೆಟ್ಟದಲ್ಲಿ ಪ್ರವಾಸಿ ಮಿತ್ರರ ನೇಮಕವಾಗಬೇಕಿದೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೂನಗಲ್ ಬೆಟ್ಟವೂ ಒಂದಾಗಿದೆ. ಈಗಾಗಲೇ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕಳೆದ 2 ವರ್ಷಗಳ ಹಿಂದೆ ಹೇಳಿದ್ದ ಇಲಾಖೆ ಅಧಿಕಾರಿಗಳು ಬೆಟ್ಟದ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ. ಶೀಘ್ರವೇ ಬೆಟ್ಟದ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಬೇಕು.ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿಕೂನಗಲ್ ಬೆಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಗ್ರಾಮಸ್ಥರ ಸಹಕಾರದಲ್ಲಿ ಸಮಾಜ ಸೇವಕ ಪುಟ್ಟಮಾಸ್ತಿಗೌಡ 30 ವರ್ಷಗಳ ಹಿಂದೆ ರಸ್ತೆ, ದೇವಾಲಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದರು. ಪ್ರಸ್ತುತ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆ ಶೀಘ್ರವೇ ಬೆಟ್ಟದ ಅಭಿವೃದ್ಧಿಗೆ ಗಮನ ಹರಿಸಬೇಕಿದೆ.ವಾಸು ಪುಟ್ಟಮಾಸ್ತಿಗೌಡ, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net