

ರಾಮನಗರ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಿತ್ರ ಪಕ್ಷವನ್ನು ಓಲೈಸಿಕೊಳ್ಳಲು ರಾಜ್ಯದ ರೈತರ ಹಿತಾಸಕ್ತಿ ಬಲಿಕೊಟ್ಟು ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಹೊರಟಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ತಮಿಳುನಾಡಿನ ಭವಾನಿ, ಮೆಟ್ಟೂರು ಸೇರಿ ಮತ್ತಿತರ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಅಲ್ಲಿನ ಬೆಳೆಗೆ ಸಾಕಷ್ಟು ನೀರು ಲಭ್ಯವಿದೆ. ಆದರೂ ಸಂಕಷ್ಟದ ಸಮಯದಲ್ಲಿ ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ ಇಡುತ್ತಿದೆ. ಇತ್ತ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ರಾಜ್ಯ ಸರ್ಕಾರ ಏಕಾಏಕಿ ಇಲ್ಲಿನ ವಾಸ್ತವ ಸ್ಥಿತಿ ಅರಿಯದೆ ನೀರು ಬಿಡುಗಡೆ ಮಾಡಿ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ ಎಂದರು.
ರಾಷ್ಟ್ರೀಯ ವಿಪತ್ತು ಎಂದು ಷೋಷಿಸಲು ಆಗ್ರಹ
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರ ಆವರಿಸಿದ್ದರೂ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದೆ. ಜತೆಗೆ, ಕಾವೇರಿ ನಿರ್ವಹಣಾ ಸಮಿತಿಗೆ ವಾಸ್ತವ ತಿಳಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ. ಹವಾಮಾನ ಇಲಾಖೆ ಆಗಸ್ಟ್ ತಿಂಗಳಿನಲ್ಲಿ ಶೇ.70ರಷ್ಟು ಮಳೆ ಕೊರತೆಯಾಗಲಿದೆ ಎಂದು ವರದಿ ನೀಡಿದೆ. ಹಾಗಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ರಾಜ್ಯವನ್ನು ಬರ ಪೀಡಿತ ಎಂದು ಘೋಷಿಸುವ ಬದಲು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು. ರೈತರ ಹಿತಾಸಕ್ತಿ ಗಣನೆಗೆ ತೆಗೆದುಕೊಂಡು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆ ಜಾರಿಗೆ ಸಂಬಂಧ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿದರು. ಆದರೆ, ಅಧಿಕಾರಕ್ಕೆ ಬಂದ ನಂತರ ರೈತರ ಹಿತ ಬಲಿ ಕೊಡುತ್ತಿದ್ದಾರೆ. ಕೂಡಲೇ ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಇದರಿಂದ ಬೆಂಗಳೂರು ಸೇರಿ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯಲು ನೀರು ಲಭ್ಯವಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸಂಘದ ಗೌರವಾಧ್ಯಕ್ಷ ಮಾದೇಗೌಡ, ಕಾರ್ಯಾಧ್ಯಕ್ಷ ಉಮೇಶ್, ಜಿಲ್ಲಾಧ್ಯಕ್ಷ ಬೈರೇಗೌಡ, ತಾಲೂಕು ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಎಸ್. ಆಯುಜ್, ಕಾರ್ಯದರ್ಶಿ ಕೃಷ್ಣಪ್ಪ, ಮುಖಂಡರಾದ ಜಯಮ್ಮ, ಶಿವಮ್ಮ ಮುಂತಾದವರು ಇದ್ದರು.