

ಚನ್ನಪಟ್ಟಣ
ತಾಲೂಕಿನ ಕನ್ನಮಂಗಲ ಗ್ರಾಮದ ಬಳಿಯ ಕಣ್ವ ರಸ್ತೆಯಲ್ಲಿರುವ ನಂದಿನಿ ಹೈಟೆಕ್ ಪೌಂಡರ್ ಪ್ಲಾಂಟ್ ನ ಗುತ್ತಿಗೆ ನೌಕರರು ವಿವಿಧ ಭೇಡಿಕೆಗಳಿಗೆ ಒತ್ತಾಯಿಸಿ ಮಂಗಳವಾರ ಕೆಲಸಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಕೆಎಂಎಫ್ ವತಿಯಿಂದ ಕಣ್ವ ರಸ್ತೆಯಲ್ಲಿ ಬೃಹತ್ ಹಾಲಿನ ಪೌಡರ್ ತಯಾರಿಸುವ ಘಟಕವನ್ನು ಆರಂಭಿಸಲಾಗಿದ್ದು, ಈ ಘಟಕದಲ್ಲಿ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ 100 ಕ್ಕೂ ಹೆಚ್ಚು ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಹೊರಗುತ್ತಿಗೆ ನೌಕರರ ಹೊಣೆ ಹೊತ್ತಿರುವ ಭೈರವೇಶ್ವರ ಎಂಬ ಸಂಸ್ಥೆ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂಬುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ವೇತನ ಸಹಿತ ರಜೆಗೆ ಆಗ್ರಹ:
ಕೆಎಂಎಫ್ ಹಾಲಿನ ಪುಡಿ ತಯಾರಿಕಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ನಮಗೆ ಕನಿಷ್ಟ ವೇತನ, ವೇತನ ಸಹಿತ ರಜೆ ಹಾಗೂ ಕಾರ್ಮಿಕರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟಕದ ಎಲ್ಲಾ ಕೆಲಸಗಳಲ್ಲೂ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಗುತ್ತಿಗೆ ಸಂಸ್ಥೆ ವೇತನ ರಹಿತ ರಜೆ ನೀಡುತ್ತಿದೆ. ಅಲ್ಲದೇ ದಿನಗೂಲಿ ನೀಡುವ ಸಲುವಾಗಿ ಕೆಲಸ ಇದ್ದಾಗ ಮಾತ್ರ ಕರ್ತವ್ಯಕ್ಕೆ ಕರೆಯುತ್ತಾರೆ. ನಮ್ಮ ಸಂಬಳ ಪಟ್ಟಿ ಇದುವರೆಗೂ ನಮಗೆ ತಿಳಿದಿಲ್ಲ, ಇಎಸ್ ಐ ಮತ್ತು ಪಿಎಫ್ ಗತಿಯೇನು ಎಂಬುದೇ ನಮಗೆ ತಿಳಿದಿಲ್ಲ ಎಂಬುದು ನೌಕರರ ಆಳಲಾಗಿದೆ.
ಮೂಲಭೂತ ಸವಲತ್ತು ಹಾಗೂ ಕನಿಷ್ಠ ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಹಲವು ತಿಂಗಳುಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಎಂಎಫ್ ಹಾಗೂ ಕಾರ್ಮಿಕ ಇಲಾಖೆ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಗುತ್ತಿಗೆ ನೌಕರರು ಘಟಕದ ಕೆಲಸ ತ್ಯಜಿಸಿ ಘಟಕದ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.