ಅಧ್ವಾನಗಳ ಆಗರವಾದ ಸಸ್ಯೋದ್ಯಾನ

20230707_111001
Published on

ಅನೈತಿಕ ತಾಣವಾದ ಕೆಂಗಲ್​ ಹನುಂತಯ್ಯ ಟ್ರೀಪಾರ್ಕ್​ಮಾಹಿತಿ ಫಲಕವಷ್ಟೇ ಇದೆ, ಗಿಡಗಳು ಮಾಯ!

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ತಾಲೂಕಿನ ಕೆಂಗಲ್​ ಸಮೀಪ ನಿರ್ಮಿಸಿದ್ದ ಕೆಂಗಲ್​ ಹನುಮಂತಯ್ಯ ಸಸ್ಯೋದ್ಯಾನ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಸಸ್ಯ ಪ್ರಿಯರನ್ನು ಸೆಳೆಯಬೇಕಿದ್ದ ಈ ಉದ್ಯಾನವನ ಅಧ್ವಾನಗಳ ಆಗರವಾಗಿದೆ.

ತಾಲೂಕಿನ ಕೆಂಗಲ್​ ಸಮೀಪದ ಬೆಂಗಳೂರು - ಮೈಸೂರು ಹೆದ್ದಾರಿ ಬದಿಯಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್​ ಹನುಮಂತಯ್ಯ ಹೆಸರಿನಲ್ಲಿ 2012ರಲ್ಲಿ ಕೆಂಗಲ್​ ಹನುಮಂತಯ್ಯ ಸಸ್ಯೋದ್ಯಾನ ನಿರ್ಮಿಸಲಾಗಿದೆ. ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶದ ಒಂದು ಭಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಇದನ್ನು ನಿರ್ಮಿಸಲಾಗಿದ್ದು, ಆದರೆ, ಈಗ ಇದರ ಮೂಲ ಉದ್ದೇಶವೇ ಬುಡಮೇಲಾಗಿದೆ.

ಹೆದ್ದಾರಿಯಲ್ಲಿ ಸಸ್ಯಕಾಶಿ!
ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶ ಹೆದ್ದಾರಿವರೆಗೂ ವ್ಯಾಪಿಸಿದ್ದು, ಈ ಕಾರಣದಿಂದ ಹೆದ್ದಾರಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ಜಾಗವನ್ನು ಪ್ರವಾಸಿ ತಾಣವನ್ನಾಗಿಸಬೇಕು ಹಾಗೂ ಜನತೆಗೆ ಸಸ್ಯಕಾಶಿಯನ್ನು ಪರಿಚಯಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಜಾಗದಲ್ಲಿ ಉದ್ಯಾನವನ ನಿರ್ಮಿಸಲಾಗಿತ್ತು. ಅದಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್​ ಹನುಮಂತಯ್ಯನವರ ಹೆಸರನ್ನು ಇಡಲಾಗಿತ್ತು.

ಆರಂಭದಲ್ಲಿ ಈ ಉದ್ಯಾನವನ ಸಾಕಷ್ಟು ಪ್ರಸಿದ್ಧಿ ಪಡೆಯುವ ಭರವಸೆ ಹುಟ್ಟುಹಾಕಿತ್ತು. ಉದ್ಯಾನವನದಲ್ಲಿ ಬಗೆಬಗೆಯ ಸಸ್ಯಗಳು (ಮಾಹಿತಿ ಸಹಿತ), ನೀರಿನ ಕಾರಂಜಿ, ವಾಕಿಂಗ್​ ಪಾಥ್​, ವಿಶ್ರಾಂತಿ ಕುಟೀರ, ರಾಶಿ ವನ, ನತ್ರ ವನ ಹೀಗೆ ನಾನಾ ವನಗಳನ್ನು ನಿರ್ಮಿಸಿ ಸಸ್ಯ ಪ್ರಿಯರನ್ನು ಸೆಳೆಯುವ ವಾತಾವರಣ ನಿರ್ಮಿಸಲಾಗಿತ್ತು. ಜತೆಗೆ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಆಟಿಕೆಗಳ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ಸದ್ಯ ಅಧ್ವಾನದ ಆಗರ!
ಪ್ರಸ್ತುತ ಈ ಉದ್ಯಾನ ಅವ್ಯವಸ್ಥೆಯ ಆಗರವಾಗಿದ್ದು, ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ. ಸಸ್ಯ, ಮರಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳಿವೆ. ಆದರೆ, ಸಸ್ಯಗಳೇ ಮಾಯವಾಗಿವೆ. ಸ್ವಚ್ಛತೆ ಹುಡುಕಬೇಕು. ಕುಡಿಯುವ ನೀರು ಸೇರಿ ಮೂಲಸೌಕರ್ಯಗಳು ಇಲ್ಲವಾಗಿದೆ. ಇನ್ನು ಉದ್ಯಾನಕ್ಕೆ ಭದ್ರತೆಯೂ ಇಲ್ಲವಾಗಿದೆ. ಸಾಕಷ್ಟು ವಿಸ್ತಾರವಾಗಿರುವ ಈ ಉದ್ಯಾನ ನಿರ್ವಹಣೆಗೆ ಇರುವುದು ಇಬ್ಬರೇ ಸಿಬ್ಬಂದಿ ಎಂಬುದು ಅವ್ಯವಸ್ಥೆಗೆ ಮತ್ತೊಂದು ಉದಾಹರಣೆ ಎನ್ನಬಹುದಾಗಿದೆ.

ಅನೈತಿಕ ಚಟುವಟಿಕೆಯ ತಾಣ!
ಪ್ರವಾಸಿಗರು ಹಾಗೂ ಸಸ್ಯಪ್ರಿಯರ ತಾಣವಾಗಬೇಕಿದ್ದ ಈ ಉದ್ಯಾನ ಸದ್ಯ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಲವರು ಈ ಉದ್ಯಾನವನ್ನು ಏಕಾಂತದ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಇಡೀ ಉದ್ಯಾನವನ್ನು ಒಂದು ಸುತ್ತು ಹಾಕಿದರೆ, ಪ್ರತಿನಿತ್ಯ ಹತ್ತಾರು ಜೋಡಿಗಳು ತಮ್ಮಿಷ್ಟದಂತೆ ವರ್ತಿಸುತ್ತಿರುವ ದೃಶ್ಯ ಕಣ್ಣಿಗೆ ರಾಚುತ್ತದೆ. ಉದ್ಯಾನದಲ್ಲಿ ಹೇಳುವವರು, ಕೇಳುವವರು ಇಲ್ಲವಾಗಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ಅನೈತಿಕ ಚಟುವಟಿಕೆ ನಡೆಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಇತರ ಪ್ರವಾಸಿಗಳಿಗೆ ಇದು ಕಿರಿಕಿರಿ ಉಂಟುಮಾಡುತ್ತಿದೆ.

ಕಾವಲು ಕಾಯಲು ಕ್ಯಾಮರಾ ಇಲ್ಲ!
ಇನ್ನು ಉದ್ಯಾನವನದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿದೆ ಎಂಬ ಫಲಕವಿದೆಯೇ ಹೊರತು ಕ್ಯಾಮರಾಗಳಿಲ್ಲ. ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶದಲ್ಲಿ ಆನೆಗಳು, ಚಿರತೆ, ಕರಡಿ ಮತ್ತಿತರ ಕಾಡುಪ್ರಾಣಿಗಳಿದ್ದು, ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ಸ್ಥಳ ಗಂಭೀರತೆಯ ಅರಿವು ಇಲ್ಲದೇ ಕೆಲವರು ಅರಣ್ಯಪ್ರವೇಶ ಮಾಡುತ್ತಿದ್ದಾರೆ.

ಕಾಯಕಲ್ಪ ನೀಡಬೇಕಿದೆ!
ಉದ್ಯಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕ್ರಮವಹಿಸುವ ಅವಶ್ಯಕತೆ ಇದೆ. ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿ ನಿಯೋಜನೆ ಮಾಡುವ ಜತೆಗೆ ಸ್ವಚ್ಛತೆ, ಮೂಲಸೌಕರ್ಯ ಪೂರೈಕೆ ಸೇರಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕಿದೆ. ಎಲ್ಲಕ್ಕಿಂತ ಮೊದಲು ಉದ್ಯಾನವನದಲ್ಲಿ ಸ್ವೇಚ್ಛಾಚಾರಿಗಳಿಗೆ ಕಡಿವಾಣ ಹಾಕುಲ ಕೆಲಸವಾಗಬೇಕಿದೆ. ಸಂಬಂಧಪಟ್ಟವರು ಇನ್ನಾದರೂ ಈ ಬಗ್ಗೆ ಗಮನ ಹರಿಸಲಿ ಎಂಬುದು ವಿಜಯವಾಣಿಯ ಕಳಕಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net