ಉತ್ತಮ ಇಳುವರಿಗಾಗಿ ಸಲಹೆ ಪಡೆಯಿರಿ ರೇಷ್ಮೆ ಇಲಾಖೆ ಉಪನಿರ್ದೇಶಕ ಬಸವರಾಜು ಕರೆ

Silk kpk
Published on

ಕನಕಪುರ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ರೇಷ್ಮೆ ಬೆಳೆಗಾರರು ಇಲಾಖೆ ಸಲಹೆಗಳನ್ನು ಪಡೆದು ವೈಜ್ಞಾನಿಕವಾಗಿ ಬಿತ್ತನೆಯನ್ನು ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಸಿ.ಡಿ.ಬಸವರಾಜು ತಿಳಿಸಿದರು.

ನಗರದ ಸರ್ಕಾರಿ ಗೂಡು ಮಾರುಕಟ್ಟೆ ಹಿಂಭಾಗದಲ್ಲಿ ರೇಷ್ಮೆ ರೈತ ಉತ್ಪಾದಕರ ಕಂಪನಿಯ ಮಾರಾಟ ಮಳಿಗೆ ಮತ್ತು ಕಚೇರಿ ಉದ್ಘಾಟನೆ ಹಾಗೂ ಜಿಲ್ಲಾ ರೇಷ್ಮೆ ರೈತ ಉತ್ಪಾದಕರ ಒಕ್ಕೂಟ ರಚನೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

ರೇಷ್ಮೆ ರೈತ ಉತ್ಪಾದಕರ ಕಂಪನಿ ರೇಷ್ಮೆ ಬೆಳೆಗಾರರ ಹಿತವನ್ನು ಕಾಯ್ದುಕೊಂಡು ಅವರಿಗೆ ಸಹಾಯ ಮಾಡುತ್ತಾ ಸರ್ಕಾರಿ ಸವಲತ್ತುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.

ರೇಷ್ಮೆ ಸಹಾಯಕ ನಿರ್ದೇಶಕ ಮುತ್ತುರಾಜು ಮಾತನಾಡಿ, ಜಿಲ್ಲೆಯಲ್ಲಿಯೇ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಇಂದು ಜಿಲ್ಲಾ ಮಟ್ಟದ ರೈತ ಚಟುವಟಿಕೆಗಳಿಗೆ ಮುಂದಾಗಿರುವುದು ಹರ್ಷದಾಯಕವಾಗಿದೆ. ಈಗ ಒಕ್ಕೂಟದ ಪದಾಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಲಿ ಎಂದರು.

ಜಿಲ್ಲಾ ರೇಷ್ಮೆ ರೈತ ಉತ್ಪಾದಕರ ಒಕ್ಕೂಟ ಜಿಲ್ಲಾಧ್ಯಕ್ಷರಾಗಿ ಡಿ.ಕೆ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಟಿ.ಕೋದಂಡರಾಮು, ಉಪಾಧ್ಯಕ್ಷರಾಗಿ ಲಕ್ಷ್ಮೀಪುರದ ಸಿದ್ದರಾಜು, ಕಾರ್ಯದರ್ಶಿಯಾಗಿ ಕೋಡಿಹಳ್ಳಿ ರಮೇಶ್, ಖಜಾಂಚಿಯಾಗಿ ಹಾರೋಹಳ್ಳಿ ರಮೇಶ್, ವಿಜ್ಞಾನಿ ಡಾ.ಚೆಲುವಾಚಾರಿ ಸಿಇಒ ಆಗಿ ನೇಮಕವಾಗಿದ್ದಾರೆ.

ಐದು ಕಂಪನಿಗಳ ಸೇರಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡರು.

ರೇಷ್ಮೆ ವಿಸ್ತರಣಾಧಿಕಾರಿಗಳಾದ ಪುಟ್ಟಮಾದಯ್ಯ, ಕುಮಾರಸ್ವಾಮಿ, ಗೂಡು ಮಾರುಕಟ್ಟೆಯ ಎ.ಡಿ.ಎಸ್ ಆನಂದ್, ನಿರ್ದೇಶಕರಾದ ಸುರೇಶ್, ಬಾಲು, ಕೃಷ್ಣಪ್ಪ, ವೆಂಕಟೇಶ್, ಉಮೇಶ್, ಉತ್ಪಾದಕ ಕಂಪನಿಯ ನಿರ್ದೇಶಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net