

ಹಾರೋಬಲೆ ಸಮೀಪ ಜಮೀನಿನಲ್ಲಿ ಇಟ್ಟಿದ್ದ ಸಿಡಿಮದ್ದು
ಕನಕಪುರ: ಕಾಡುಹಂದಿ ಬೇಟೆಗಾಗಿ ಜಮೀನೊಂದರಲ್ಲಿ ಇಟ್ಟಿದ್ದ ನಾಡಬಾಂಬ್ ಸಿಡಿದು ವ್ಯಕ್ತಿಯೊಬ್ಬನ ಕೈ ಛಿದ್ರವಾಗಿರುವುದು ಸಾತನೂರು ಠಾಣಾ ವ್ಯಾಪ್ತಿಯ ಹಾರೋಬಲೆ ಸಮೀಪದ ಡಿ.ಕೆ.ನಗರದಲ್ಲಿ ನಡೆದಿದೆ.
ಡಿ.ಕೆ.ನಗರದ ಸಚಿನ್ (28) ಗಾಯಾಳು. ಗುರುವಾರ ಬೆಳಗ್ಗೆ ಸಚಿನ್ ಜಮೀನಿನಲ್ಲಿದ್ದಾಗ ನಾಡಬಾಂಬ್ ಸಿಡಿದಿದೆ. ಗಾಯಗೊಂಡ ಸಚಿನ್ನನ್ನು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಚಿನ್ ಕೊಳ್ಳೇಗಾಲ ಮೂಲದವನಾಗಿದ್ದು, ಈತನಿಗೆ ಕಾಡುಹಂದಿ ಬೇಟೆಗಾರರ ಸ್ನೇಹವಿದೆ. ಸುದ್ದಿ ತಿಳಿದ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಲ್.ಕೃಷ್ಣ, ಸಾತನೂರು ಎಸ್ಐ ಹರೀಶ್ ಸ್ಫೋಟದ ಸ್ಥಳ ಪರಿಶೀಲನೆ ಹಾಗೂ ಸಚಿನ್ ಮನೆಯ ಶೋಧ ನಡೆಸಿದರು. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.