ಕನಕಪುರದಲ್ಲಿ 40 ಮೂಟೆ ಪಡಿತರ ಅಕ್ಕಿ ವಶ ವಾಹನ ಚಾಲಕನ ಬಂಧನ

25 kkp 1
Published on

ಕನಕಪುರ

ನಗರದ ಪೈಪ್‌ಲೈನ್ ರಸ್ತೆಯಲ್ಲಿ ಅಕ್ರಮವಾಗಿ 40 ಮೂಟೆ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳು ಮಂಗಳವಾರ ಮಧ್ಯಾಹ್ನ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

4 ಸಾವಿರ ಕೆ.ಜಿ. ಪಡಿತರ ಅಕ್ಕಿ ಸಾಗಿಸುತ್ತಿರುವ ಮಾಹಿತಿ ಪಡೆದ ಸಂಸ್ಥೆಯ ತಾಲೂಕು ಅಧ್ಯಕ್ಷ ನವೀನ್ ಮತ್ತು ತಂಡದವರು ವಾಹನ ತಡೆದು ವಿಚಾರಿಸಿದಾಗ ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿ ಹಳ್ಳಿಯಿಂದ ರಾಗಿ ಖರೀದಿಸಿದ್ದೇವೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಕೂಡಲೇ 102ಕ್ಕೆ ಕರೆ ಮಾಡಿದ ನವೀನ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆಹಾರ ಇಲಾಖೆ ಶಿರಸ್ತೇದಾರ್ ಪ್ರಕಾಶ್ ಹಾಗೂ ಫುಡ್ ಇನ್‌ಸ್ಪೆಕ್ಟರ್ ವಿನುತಾ ಹಾಗೂ ಪೊಲೀಸರು ವಾಹನ ಪರಿಶೀಲನೆ ನಡೆಸಿ ಪಡಿತರ ಅಕ್ಕಿ ಸಾಗಿಸುತ್ತಿರುವ ಆರೋಪದ ಮೇರೆಗೆ ಚಾಲಕ ತಿಲಕ್ ನಗರದ ಮಹಮ್ಮದ್ ಕಮ್ರಾನ್, ವಾಹನ ಮತ್ತು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳೂ ನಗರ ಠಾಣೆಗೆ ಲಿಖಿತ ದೂರು ನೀಡಿದ್ದು, ಬಡವರಿಗೆ ನೀಡಬೇಕಾಗಿರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಈ ಜಾಲದಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸ್ಥೆ ಕಾರ್ಯದರ್ಶಿ ರಾಜಗೋಪಾಲ್, ಸಂಘಟನಾ ಕಾರ್ಯದರ್ಶಿ ಶೇಖರ್, ಶ್ರೀರಾಮಸೇನೆಯ ಜನಾರ್ದನ್, ಆಹಾರ ಇಲಾಖೆ ಪ್ರಕಾಶ್, ವಿನುತಾ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net