ವಿದ್ಯಾರ್ಥಿಯ ವ್ಯಕ್ತಿತ್ವ ಬದಲಿಸುವ ಶಕ್ತಿ ಸೇವಾದಳಕ್ಕಿದೆ ದೈಹಿಕ ಶಿಕ್ಷಣ ಇಲಾಖೆ ಪರಿವೀಕ್ಷಕ ಸತೀಶ್ ಅಭಿಮತ

11 KKP 03
Published on

 ಕನಕಪುರ

ದೇಶದ ಭದ್ರತೆಗಾಗಿ ಹುಟ್ಟಿದ ಭಾರತ ಸೇವಾದಳ ಸಂಘಟನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡಾಗ ಮತ್ತಷ್ಟು ದೇಶಪ್ರೇಮ ಬೆಳೆಯುತ್ತದೆ ಎಂದು ದೈಹಿಕ ಶಿಕ್ಷಣ ಇಲಾಖೆ ಪರಿವೀಕ್ಷಕ ಡಿ. ಸತೀಶ್ ತಿಳಿಸಿದರು.

ನಗರದ ಪುರಸಭೆ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ, ಭಾರತ ಸೇವಾದಳ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಅವರ ಕನಸಿನಂತೆ ಹುಟ್ಟುಹಾಕಲ್ಪಟ್ಟ ಸೇವಾದಳ ದೇಶ, ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದು, ಸಮಾಜಮುಖಿ ಸೇವೆ ಮಾಡುತ್ತಿದೆ. ಇಂತಹ ಶಿಸ್ತು, ದೇಶಭಕ್ತಿ ಭಾವನೆಯನ್ನು ಕಲಿಸುವ ಸೇವಾದಳದ ಘಟಕ ಪ್ರಾರಂಭಿಸುವ ಅಗತ್ಯವಿದೆ. ಸಮವಸ್ತ್ರ ಮತ್ತು ಅನುದಾನ ಸರ್ಕಾರವೇ ಭರಿಸುವುದರಿಂದ ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವ ಬದಲಿಸುವ ಶಕ್ತಿ ಇದಕ್ಕಿದೆ. ಪ್ರತಿ ಹೋಬಳಿ ಮತ್ತು ಶಾಲೆಗಳಲ್ಲಿ ತಂಡಗಳನ್ನು ರಚಿಸಿ ಭಾರತ್ ಸೇವಾದಳಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದರು.

ಜಿಲ್ಲಾ ಸಮಿತಿಯ ವಸಂತ್‌ಕುಮಾರ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ಶಿಸ್ತು, ಸೇವಾ ಮನೋಭಾವನೆ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತ ತರಬೇತಿ ನೀಡುವ ಕೆಲಸ ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾದಳದ ಕೋಶಾಧ್ಯಕ್ಷ ಪಿ.ಆನಂದ್ ಮಾತನಾಡಿ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿನ ಎಲ್ಲ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡಬೇಕೆಂಬ ಹಂಬಲ ಹೊಂದಿದ್ದರು. ವಿದ್ಯೆ ಕಲಿತ ಮಕ್ಕಳ ಪ್ರಶ್ನೆಗಳಿಗೆ ಪಾಲಕರು ಉತ್ತರಿಸಲಾಗದಿದ್ದಾಗ ಮಹಾರಾಜರೂ ವಿದ್ಯೆಯ ಮಹತ್ವ ಅರಿತು ಅಕ್ಷರ ಕಲಿಯಬೇಕೆಂಬ ಹಂಬಲದಿಂದ ಅಕ್ಷರ ಆಂದೋಲನ ಪ್ರಾರಂಭಿಸಿ ಅವರೂ ಭಾಗಿಯಾಗಿದ್ದರು. ಶಿಕ್ಷಣದ ಮಹತ್ವವನ್ನು ಅರಿತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೆ ನಾವು ಸಹ ಕಲಿಯಬೇಕಿದೆ ಎಂದರು.

ಸೇವಾದಳದ ಟಿಪಿಇಒ ಸತೀಶ್, ಇಸಿಒ ಮಹೇಶ್, ಸಿಆರ್‌ಪಿ ಮಂಜುನಾಥ್, ಸದಸ್ಯರಾದ ಶ್ರೀನಿವಾಸಯ್ಯ, ಚಂದ್ರಶೇಖರ್, ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net