

ಐದಾರು ವರ್ಷಗಳ ಹಿಂದೆ ಸಂಪೂರ್ಣ ಬ್ರೇಕ್ ಬಿದ್ದಿತ್ತು
ಎಂ.ಎನ್.ಸುರೇಶ್ ಕನಕಪುರ
ರಾಮನಗರ ಜಿಲ್ಲೆಯಲ್ಲಿ ಐದಾರು ವರ್ಷಗಳ ಹಿಂದೆ ಸಂಪೂರ್ಣವಾಗಿ ಬ್ರೇಕ್ ಬಿದ್ದಿದ್ದ ಮರಳು ಅಕ್ರಮ ಗಣಿಗಾರಿಕೆ ಮತ್ತೆ ತಲೆ ಎತ್ತುತ್ತಿದೆ.
ಅವ್ಯಾಹತವಾಗಿ ನಡೆಯುತ್ತಿದ್ದ ದಂಧೆ ಕನಕಪುರ ತಾಲೂಕು ಸಾತನೂರಿನಲ್ಲಿ ನಿಧಾನವಾಗಿ ಆರಂಭಗೊಳ್ಳುತ್ತಿದೆ.
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ದಂಧೆ ಮತ್ತು ಸಾಗಾಣಿಕೆ ನಿರಂತರವಾಗಿ ಸಾಗಿದ್ದ ಹಿನ್ನೆಲೆಯಲ್ಲಿ ಕಡಿವಾಣ ಹೇರಲಾಗಿತ್ತು. ಹಾಗಾಗಿ ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಮರಳನ್ನು ನೋಡಲೂ ಸಿಗದ ಪರಿಸ್ಥಿತಿ ಇತ್ತು. ಆದರೆ ಇದೀಗ ಸಾತನೂರಿನಲ್ಲಿ ಟ್ರಾಕ್ಟರ್ ಮತ್ತು ಲಾರಿಗಳಲ್ಲಿ ಹೊಸಕಟ್ಟಡಗಳ ನಿರ್ಮಾಣಕ್ಕೆ ಮರಳುನ್ನು ಸಾಗಿಸಲಾಗುತ್ತಿದೆ. ಕಬ್ಬಾಳು ಗ್ರಾಮದಿಂದ ಕಚುವನಹಳ್ಳಿಗೆ ಸಾಗುವ ಮಾರ್ಗಮಧ್ಯೆ ಚಿಕ್ಕಾಲಹಳ್ಳಿ ಹಳ್ಳದಲ್ಲಿ ನಾಗರಸನಕೋಟೆ ಮತ್ತು ಚಿಕ್ಕಾಲಹಳ್ಳಿಯ ಕೆಲವು ದಂಧೆಕೋರರು ರಾತ್ರೋರಾತ್ರಿ ಮರಳು ಸಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಬಗ್ಗೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಸಾತನೂರು ಠಾಣೆ ಸಮೀಪ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಎದುರು ಲೋಡ್ಗಟ್ಟಲೆ ಮರಳನ್ನು ತಂದು ಸುರಿಯುತ್ತಿದ್ದರೂ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲೂಕು ಆಡಳಿತ ಕಂಡೂ ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದೆ.
ಈ ಹಿಂದೆ ಕಡಿವಾಣ ಬಿದ್ದಿತ್ತು
ಈ ಹಿಂದೆ ತಾಲೂಕಿನಲ್ಲಿ ನಿರಂತರವಾಗಿ ಕೆರೆ, ಹಳ್ಳ, ಕೊಳ್ಳ, ನದಿ ಪಾತ್ರಗಳ ಒಡಲನ್ನು ಬಗೆದು ಮರಳು ಸಾಗಿಸುತ್ತಿದ್ದುದರಿಂದ ಭೂಮಿಯ ಪದರ ಸಡಿಲಗೊಂಡು ಅಪಾಯ ಸ್ಥಿತಿ ಎದುರಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆರ್.ಕೆ.ರಾಜು ಜಿಲ್ಲಾಧಿಕಾರಿಯಾಗಿದ್ದಾಗ ದಂಧೆಗೆ ಬ್ರೇಕ್ ಹಾಕಲು ಆದೇಶ ನೀಡಿದ್ದರು. ಆದರೂ ಕದ್ದು ಮುಚ್ಚಿ ದಂಧೆ ಸಾಗಿತ್ತು.
ಆದರೆ ಅನೂಪ್ ಎ.ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಸಂಪೂರ್ಣ ಬ್ರೇಕ್ ಬಿದ್ದಿತ್ತು. ನಂತರ ಬಂದ ಎಸ್ಪಿ ಸಂತೋಷ್ಬಾಬು, ಎಂ.ಗಿರೀಶ್ ಕೂಡ ದಂಧೆಗೆ ಕಡಿವಾಣ ಹಾಕಿದ್ದರು. ನಂತರದ ದಿನಗಳಲ್ಲಿ ದಂಧೆಕೋರರು ಫಿಲ್ಟರ್ ಮರಳು ದಂಧೆಗೆ ಮುಂದಾಗಿದ್ದಾಗಲೂ ಜಿಲ್ಲಾ ಮತ್ತು ಪೊಲೀಸ್ ಆಡಳಿತ ಕಡಿವಾಣ ಹಾಕಿತ್ತು. ಕಳೆದ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತೆ ಗರಿಗೆದರುತ್ತಿರುವ ದಂಧೆಗೆ ಕಡಿವಾಣ ಹಾಕಿ ಪರಿಸರ ರಕ್ಷಣೆಗೆ ಮುಂದಾಗುವುದೇ ಕಾದು ನೋಡಬೇಕಿದೆ.
ಲೋಕಾಯುಕ್ತ ಎಚ್ಚರಿಕೆ
ಅಕ್ರಮ ಮರಳು ದಂಧೆ ತಡೆಯುವಂತೆ ಪ್ರತಿಭಟನೆ ಹಾಗೂ ದೂರುಗಳಿಂದ ಎಚ್ಚೆತ್ತುಕೊಂಡಿದ್ದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎಲ್.ಸಂತೋಷ್ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದು ದಂಧೆಗೆ ಕಡಿವಾಣ ಹಾಕುವಂತೆ ಸಲಹೆ ನೀಡಿದ್ದರು.
ಸಾತನೂರು ಭಾಗದಲ್ಲಿ ಮರಳು ದಂಧೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಪ್ರವಿಣ್, ಉಪತಹಸೀಲ್ದಾರ್, ಸಾತನೂರು
ಸಾತನೂರು ಭಾಗದಲ್ಲಿ ಮರಳು ದಂಧೆ ತಲೆ ಎತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ಥಗಿತಗೊಂಡಿದ್ದ ದಂಧೆಗೆ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಪರಿಸರ ನಾಶಕ್ಕೆ ಕಾರಣವಾಗುವ ಇಂತಹ ದಂಧೆ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಲು ಸರ್ಕಾರ ಕ್ರಮಕೈಗೊಳ್ಳಬೇಕಿದೆ.
ಕುಮಾರಸ್ವಾಮಿ, ಪ್ರಗತಿಪರ ಸಂಟನೆಗಳ ಒಕ್ಕೂಟದ ಅಧ್ಯಕ್ಷ