

ಕನಕಪುರ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧಗೊಳಿಸುವ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ಎಂ.ಜಿ.ರಸ್ತೆಯ ಕೆಲವು ಅಂಗಡಿಗಳಿಗೆ ಧಿಡೀರ್ ದಾಳಿ ನಡೆಸಿ, ಅಂಗಡಿಗಳಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಕೈಚೀಲಗಳನ್ನು ಬುಧವಾರ ವಶಪಡಿಸಿಕೊಂಡರು.
ಎಂ.ಜಿ.ರಸ್ತೆಯ ಕಲ್ಪತರು ಕಾಂಪ್ಲೆಕ್ಸ್ ಸಮೀಪದ ಫುಟ್‌ಪಾತ್ ಅಂಗಡಿ ಸೇರಿ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲ ಹಾಗೂ ಪ್ಲಾಸ್ಟಿಕ್ ಲೋಟ ಇತ್ಯಾದಿ ವಸ್ತುಗಳನ್ನು ವಶಕ್ಕೆ ಪಡೆದರು. ಪರಿಸರ ಇಂಜಿನಿಯರ್ ಧನಂಜಯ್ ಮಾತನಾಡಿ, ನ್ಯಾಯಾಲಯ ಹಾಗೂ ಸರ್ಕಾರದ ಕಟ್ಟು ನಿಟ್ಟಿನ ಆದೇಶದ ಮೇರೆಗೆ ಈಗಾಗಲೇ ವರ್ತಕರಿಗೆ ಹಾಗೂ ಫುಟ್ ಪಾತ್ ವ್ಯಾಪಾರಿಗಳಿಗೆ ಪೂರ್ವಬಾವಿ ಸಭೆ ನಡೆಸಿ ಸೂಚನೆ ನೀಡಿದ್ದರು.
ಪ್ಲಾಸ್ಟಿಕ್ ನಿಷೇಧಕ್ಕೆ ಇವರು ಸಹಕಾರ ನೀಡುತ್ತಿಲ್ಲ. ನಗರಸಭೆಯಿಂದ ದಾಳಿ ಮುಂದುವರೆಯಲಿದ್ದು, 500 ರೂ.ನಿಂದ 40 ಸಾವಿರದವರೆಗೆ ದಂಡ ವಿಧಿಸಲಾಗುವುದು. ಆದ್ದರಿಂದ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಬ್ಯಾಗ್‌ಗಳನ್ನು ಬಳಸಿ, ಪ್ಲಾಸ್ಟಿಕ್ ನಿಷೇಧಕ್ಕೆ ಕೈಜೊಡಿಸಬೇಕು ಎಂದರು. ನಗರಸಭೆ ಆರೋಗ್ಯ ಅಧಿಕಾರಿ ವೆಂಕಟೇಶ್, ನಾಗೇಶ್, ಸಿಬ್ಬಂದಿ ಹಾಜರಿದ್ದರು.