

ಎಂ.ಎನ್.ಸುರೇಶ್
ಕನಕಪುರ ವಿಧಾನಸಭಾ ಕ್ಷೇತ್ರ 4 ದಶಕಗಳಿಂದ ಜನತಾ ಪರಿವಾರದ ಭದ್ರಕೋಟೆಯಾಗಿತ್ತು. ಕಳೆದ 8 ವರ್ಷಗಳಿಂದೀಚೆಗೆ ಡಿ.ಕೆ. ಶಿವಕುಮಾರ್ ಪ್ರವೇಶದಿಂದ ಸಮಬಲ ಹೋರಾಟ ಮಾಡುತ್ತಿದ್ದ ಜನತಾ ಪರಿವಾರ ಕ್ರಮೇಣ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಕ್ಷದಿಂದ ದೂರ ಉಳಿದು ತಟಸ್ಥರಾಗಿದ್ದಾರೆ.
ಕ್ಷೇತ್ರದಲ್ಲಿ ಹೀನಾಯ ಸ್ಥಿತಿಗೆ ತಲುಪಿರುವ ಜೆಡಿಎಸ್ ಬಲವರ್ಧನೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಟೊಂಕ ಕಟ್ಟಿ ನಿಲ್ಲುತ್ತಾರಾ ಎಂಬ ಪ್ರಶ್ನೆ ನಿಷ್ಠಾವಂತ ಕಾರ್ಯಕರ್ತರಲ್ಲಿ ಮೂಡಿದೆ. ಕ್ಷೇತ್ರ ಮರು ವಿಂಗಡಣೆಯಿಂದ ಸಾತನೂರು ಕ್ಷೇತ್ರದಿಂದ ಕನಕಪುರಕ್ಕೆ ಡಿ.ಕೆ.ಶಿವಕುಮಾರ್ ಪ್ರವೇಶಿಸಿದ ಮೇಲೆ ನಿಧಾನವಾಗಿ ಕುಸಿತ ಕಂಡ ಜೆಡಿಎಸ್ ಇದೀಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಪಿಜಿಆರ್ ಸಿಂಧ್ಯಾ, ಮಾಜಿ ಪ್ರಧಾನಿ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ವಿವಿಧ ಚುನಾವಣೆಗಳಲ್ಲಿ ಜನತಾ ಪರಿವಾರದ ದಿಗ್ಗಜರಾಗಿ ಗೆಲುವು ಸಾಧಿಸಿ ಪಕ್ಷದ ಬಲವರ್ಧನೆಗೊಳಿಸಿದ್ದರು. ಪಿಜಿಆರ್ ಸಿಂಧ್ಯಾ ಸತತವಾಗಿ 25 ವರ್ಷ ಕನಕಪುರ ಸಾಮ್ರಾಜ್ಯ ಆಳಿದ್ದರು. ಜನತಾ ಪರಿವಾರದ ಸಂಟನೆಯಲ್ಲಿ ಜಾತಿಯ ಬೆಂಬಲ ಇಲ್ಲದಿದ್ದರೂ ಜನತಾದಳ ಗಟ್ಟಿಗೊಳಿಸಿದ ಕೀರ್ತಿ ಪಿಜಿಆರ್ ಸಿಂಧ್ಯಾ ಅವರಿಗೆ ಸಲ್ಲುತ್ತದೆ.
ಅವರ ನಂತರ ನಿಧಾನವಾಗಿ ಪಕ್ಷ ಶಕ್ತಿ ಕುಂದತೊಡಗಿತು. ಜನತಾ ಪರಿವಾರ ಚದುರಿ ಛಿದ್ರವಾಯಿತು. ಸುಳಿಗಾಳಿಯಂತೆ ಆಗಮಿಸಿ ನಿಧಾನವಾಗಿ ಬಲಗೊಂಡ ಡಿಕೆಶಿ ಕ್ಷೇತ್ರದಲ್ಲಿ ಬಿರುಗಾಳಿಯಂತೆ ಅಬ್ಬರಿಸಿದರು. ಡಿಕೆಶಿಗೆ ಸೆಡ್ಡು ಹೊಡೆದಿದ್ದ ಡಿ.ಎಂ.ವಿಶ್ವನಾಥ್ ಹಾಗೂ ನಾರಾಯಣಗೌಡರಂತಹ ನಾಯಕರೂ ಸೋತು ಹೋದರು. ಜೆಡಿಎಸ್ನಿಂದ ದೂರವಾದ ಈ ಇಬ್ಬರು ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡರು. ಇದರಿಂದ ಜೆಡಿಎಸ್ನಲ್ಲಿದ್ದವರಿಗೆ ಆತ್ಮಸ್ಥೆರ್ಯ ಕುಸಿಯುವಂತಾಯಿತು.
ಇತ್ತೀಚೆಗೆ ಕ್ಷೇತ್ರದಲ್ಲಿ ಜೆಡಿಎಸ್ ನಾವಿಕನಿಲ್ಲದ ದೋಣಿಯಂತಾಗಿದೆ. ಕಾರ್ಯಕರ್ತರು, ಮುಖಂಡರು ಕಂಗಾಲಾಗಿದ್ದಾರೆ. ಮುಂಚೂಣಿಯಲ್ಲಿದ್ದ ನಾಯಕರು ನಾಪತ್ತೆಯಾಗಿದ್ದಾರೆ. ಇಷ್ಟೆಲ್ಲಾ ಹೀನಾಯ ಸ್ಥಿತಿಗೆ ತಲುಪಿದ್ದರೂ ಜೆಡಿಎಸ್ ವರಿಷ್ಠರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ತಾಲೂಕಿನಲ್ಲಿ ಜಾತ್ಯತಿತ ಜನತಾ ದಳಪತಿಯಾಗಿದ್ದ ತಾಲೂಕು ಅಧ್ಯಕ್ಷ ಬಿ.ನಾಗರಾಜು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಈಗ ತಾಲೂಕು ಜೆಡಿಎಸ್ ಜವಾಬ್ದಾರಿ ಹೊರುವವರು ಯಾರು ಎನ್ನುವುದು ಪ್ರಶ್ನೆಯಾಗಿದೆ. ಪಕ್ಷದಲ್ಲಿ ನಿರುತ್ಸಾಹ, ಅಸಹಾಯಕತೆಯಿಂದ ಜೆಡಿಎಸ್ ಯಜಮಾನನಿಲ್ಲದ ಮನೆಯಂತಾಗಿದೆ. ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರ ಈಗ ಸಂಪೂರ್ಣವಾಗಿ ಕಾಂಗ್ರೆಸ್ಮಯವಾಗಿದೆ. ಬಹುತೇಕ ಮುಖಂಡರು ಕಾಂಗ್ರೆಸ್ ತೆಕ್ಕೆ ಸೇರಿದ ಪರಿಣಾಮ ಜೆಡಿಎಸ್ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಎಚ್ಡಿಕೆಯಿಂದ ಕನಕಪುರ ಕಡೆಗಣನೆ
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಂಟನೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರೇ ನಿರ್ಲಕ್ಷಿಸಿದ್ದು, ಬಿ.ನಾಗರಾಜು ಅವರಿಗೆ ಟಿಕೆಟ್ ೂಷಣೆ ಮಾಡಿದ್ದು ಬಿಟ್ಟರೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಕೊನೆಯ ದಿನದವರೆಗೂ ಪ್ರಚಾರಕ್ಕೆ ಅವರಾಗಲಿ, ಅವರ ಕುಟುಂಬದ ಸದಸ್ಯರಾಗಲಿ, ಪಕ್ಷದ ರಾಜ್ಯಾಧ್ಯಕ್ಷರಾಗಲಿ ಆಗಮಿಸಿಲ್ಲ. ಪಕ್ಷದ ಪರ ಪ್ರಚಾರ ಮಾಡುವುದಿರಲಿ, ಆರ್ಥಿಕ ನೆರವನ್ನೂ ನೀಡಲಿಲ್ಲ. ಕೊನೆಯ ದಿನದ ಪ್ರಚಾರದ ವೇಳೆ ಹತ್ತಾರು ಸಾವಿರ ಜನರನ್ನು ಸೇರಿಸಿ ವೇದಿಕೆ ಸಿದ್ಧಪಡಿಸಿದ್ದರೂ ಎಚ್ಡಿಕೆ ಆಗಮಿಸದೆ ಕೈಕೊಟ್ಟಿದ್ದು, ಇದರಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದೂ ಉಂಟು. ಕುಮಾರಸ್ವಾಮಿ ನಡವಳಿಕೆಯಿಂದಲೇ ತಾಲೂಕಿನಲ್ಲಿ ಪಕ್ಷ ಇಂತಹ ಹೀನಾಯ ಸ್ಥಿತಿ ತಲುಪಿದೆ. ಮತ್ತೆ ಅವರೇ ಸ್ವತ@ ಬಂದು ೇತ್ರದಲ್ಲಿ ಪಕ್ಷದ ಉಳಿವಿಗೆ ಹಾಗೂ ಕಾರ್ಯಕರ್ತರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳುತ್ತಾರೆ ಜೆಡಿಎಸ್ನ ಕಾರ್ಯಕರ್ತ ಕುರುಪೇಟೆ ನಾಗರಾಜು.
ಹತಾಶರಾಗಬೇಡಿ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಒಂದೇ ಕಾರಣ ಹಾಗೂ ರಾಜಕೀಯ ಕುತಂತ್ರಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿದೆಯೇ ಹೊರತು ಮತ್ಯಾವುದೇ ತೊಂದರೆಯಿಲ್ಲ. ಸೋಲಿನಿಂದ ಯಾರೂ ಹತಾಶರಾಗುವುದಾಗಲಿ, ಹೆದರುವುದಾಗಲಿ ಬೇಡ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಸಂಟನೆ ಮಾಡೋಣ. ಕುಮಾರಣ್ಣನವರು ಕ್ಷೇತ್ರಕ್ಕೆ ಆಗಮಿಸಿ ಮತ್ತೆ ಪಕ್ಷದ ಬಲವರ್ಧನೆಗೆ ಮುಂದಾಗಲಿದ್ದಾರೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಗರಾಜು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.