

ಏಳಗಳ್ಳಿ, ಉಯ್ಯಂಬಳ್ಳಿ ಪಂಚಾಯಿತಿ ಪಬ್ಲಿಕ್ ಶಾಲೆಗಳ ಅಭಿವೃದ್ಧಿ ಇಲ್ಲಿ ಎಲ್ಲವೂ ಹೈಟೆಕ್, ಮಕ್ಕಳಿಗೆ ಸಕಲ ಸೌಲಭ್ಯ
ಗಂಗಾಧರ್ ಬೈರಾಪಟ್ಟಣ ರಾಮನಗರ
ಸಮುದಾಯದ ಸಹಭಾಗಿತ್ವ ಇದ್ದರೆ ಅಭಿವೃದ್ಧಿ ಕಾರ್ಯಗಳು ಯಶಸ್ವಿ ಆಗುತ್ತವೆ ಎನ್ನುವುದಕ್ಕೆ ಕನಕಪುರದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆಯೇ ಸಾಕ್ಷಿ.
ಶಿಕ್ಷಕರ ಕೊರತೆಯಿಂದಾಗಿ ಕನಕಪುರ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದೆ. ಇಂತಹ ನಕಾರಾತ್ಮಕ ಸುದ್ದಿಯ ನಡುವೆಯೇ ಕನಕಪುರದ ಏಳಗಳ್ಳಿ ಮತ್ತು ಉಯ್ಯಂಬಳ್ಳಿಯಲ್ಲಿ ನಡೆಯುತ್ತಿರುವ ಗ್ರಾಪಂ ಪಬ್ಲಿಕ್ ಶಾಲೆ ಯಶಸ್ವಿಯಾಗಿ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕ ಸಹಭಾಗಿತ್ವವೇ ಕಾರಣ ಎನ್ನುವುದು ಸಾಬೀತಾಗಿದೆ.
ಕನಕಪುರದ ಉಯ್ಯಂಬಳ್ಳಿ ಕಾಡಿಗೆ ಹೊಂದಿಕೊಂಡಿರುವ ಹೋಬಳಿಯಾಗಿದ್ದು, ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಈಗ ಈ ಹೋಬಳಿಗೂ ಶಿಕ್ಷಕ ಕೊರತೆ ಕಾಡುತ್ತಿದೆ. ಶಾಲೆಗಳಿಗೆ ಶಿಕ್ಷಕರು ಹೋಗಲು ಹಿಂಜರಿಯುತ್ತಿದ್ದರು. ಇದರಿಂದಾಗಿ ಶಿಕ್ಷಣ ಬೇಕು ಎಂದರೆ ದೂರದ ತಮ್ಮ ಸಂಬಂಧಿಗಳ ಮನೆಯಲ್ಲಿಯೋ, ಹಾಸ್ಟೆಲ್ನಲ್ಲೋ ಮಕ್ಕಳನ್ನು ಬಿಟ್ಟು ಓದಿಸಬೇಕಿತ್ತು. ಇಲ್ಲವೇ ಕಾಡಿನಲ್ಲೇ ನಡೆದು ಶಾಲೆಗೆ ಹೋಗಬೇಕಿತ್ತು. ಆದರೆ ಈಗ ಇಲ್ಲಿನ ಪರಿಸ್ಥಿತಿಯೇ ಬೇರೆ ಆಗಿದೆ.
ಎರಡು ಪಬ್ಲಿಕ್ ಶಾಲೆ
ದೂರದ ಹಿರೇ ಮಡಿವಾಳದಿಂದ ಆರಂಭಗೊಂಡು ಉಯ್ಯಂಬಳ್ಳಿವರೆಗೂ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದಾಗಿ ಮಕ್ಕಳು ಒಂದೇ ಸೂರಿನಡಿ ಓದುವಂತಾಗಿದೆ. ಅದರಲ್ಲೂ ಖಾಸಗಿ ಶಾಲೆಗಳು ನಾಚುವಂತೆ ಇಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಏಳಗಳ್ಳಿಯಲ್ಲಿ ಒಂದು ಪಬ್ಲಿಕ್ ಶಾಲೆ ಇದ್ದರೆ, ಉಯ್ಯಂಬಳ್ಳಿಯಲ್ಲಿ ಒಂದು ಇದೆ. ಈ ಎರಡೂ ಶಾಲೆಗಳಿಂದ ವಿವಿಧ ಗ್ರಾಮಗಳ ಹಾಗೂ ಶಾಲೆಗಳ ಒಟ್ಟು 420 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಏಳಗಳ್ಳಿಯಲ್ಲಿ 1-8ನೇ ತರಗತಿವರೆಗೆ ಕಲಿಯಲು ಅವಕಾಶ ಇದ್ದರೆ, ಉಯ್ಯಂಬಳ್ಳಿಯಲ್ಲಿ 1-10ನೇ ತರಗತಿವರೆಗೂ ಓದಬಹುದಾಗಿದೆ. ಇನ್ನು ಈ ಶಾಲೆಗಳಲ್ಲಿ ತಲಾ 4 ಮಂದಿ ಸರ್ಕಾರದಿಂದ ನೇಮಕಗೊಂಡಿರುವ ಶಿಕ್ಷಕರು, 5 ಪ್ರೌಢಶಾಲೆ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಜತೆಗೆ 8 ಅತಿಥಿ ಶಿಕ್ಷಕರು ಶಾಲೆಯ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ.
ಉತ್ತಮ ಸೌಲಭ್ಯ
ಗ್ರಾಪಂ ಪಬ್ಲಿಕ್ ಶಾಲೆಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರತಿ ಮಗುವಿಗೆ ಬ್ಲೇಜರ್, ಶೂ ಸಹಿತ ಸಮವಸ, ಜತೆಗೆ ಅತ್ಯಾಧುನಿಕ ಡೈನಿಂಗ್ ಹಾಲ್, ಶೌಚಗೃಹ ನಿರ್ಮಾಣ, ಶಾಲಾ ಕೊಠಡಿಗಳಲ್ಲಿ ರೀಡಿಂಗ್ ಟೇಬಲ್ಗಳನ್ನು ಸಹ ಒದಗಿಸಲಾಗುತ್ತಿದೆ. ಅಲ್ಲದೆ, ದೂರದ ಊರುಗಳಿಂದ ಬರುವ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ. ಇನ್ನು ಅಡುಗೆ ಸಹಾಯಕರು ತಮ್ಮೂರಿನ ಮಕ್ಕಳನ್ನು ಕರೆದುಕೊಂಡು ಹೋಗಿ ಬರುವ ಜವಾಬ್ದಾರಿ ಹೊತ್ತಿದ್ದು, ಈ ಎರಡೂ ಶಾಲೆಗಳು ಮಾದರಿಯಾಗಿವೆ.
ಸಮುದಾಯ ಸಹಭಾಗಿತ್ವ
ಈ ಎರಡೂ ಶಾಲೆಗಳು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ಬೆಳೆಯಲು ಪ್ರಮುಖ ಕಾರಣ ಸಮುದಾಯದ ಸಹಭಾಗಿತ್ವ. ಸ್ಥಳಿಯರು ಹಾಗೂ ವಿವಿಧ ಶಾಲೆಗಳಲ್ಲಿ ಓದಿದ ಹಳೇ ವಿದ್ಯಾರ್ಥಿಗಳು ಕೈಲಾದ ಮಟ್ಟಿಗೆ ಆರ್ಥಿಕ ನೆರವು ನೀಡುವ ಜತೆಗೆ ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೆರವು ನೀಡುತ್ತಿದ್ದಾರೆ. ಇನ್ನು ಬಸ್ಗಳ ವ್ಯವಸ್ಥೆಗಾಗಿ ತಾಲೂಕು ಪಂಚಾಯತಿಯಿಂದಲೇ ಅನುದಾನ ನೀಡಲಾಗುತ್ತಿದೆ.
ಆಂಗ್ಲ ಮಾಧ್ಯಮಕ್ಕೆ ಮನವಿ
ಪ್ರಸ್ತುತ ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದ್ದು ಕೆಲವು ಪಾಲಕರು ಇಂಗ್ಲಿಷ್ ಮಾಧ್ಯಮಕ್ಕೂ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದ ಜತೆಗೆ ಇಂಗ್ಲಿಷ್ನಲ್ಲಿ ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಮುಂದಿನ ಸಾಲಿನಿಂದ ಇಂಗ್ಲಿಷ್ ಮಾಧ್ಯಮಕ್ಕೂ ಅವಕಾಶ ಕೊಡುವಂತೆ ಶಾಲಾ ಶಿಕ್ಷಣ ಇಲಾಖೆ ಮನವಿ ಮಾಡಿದೆ.
ಸಾರ್ವಜನಿಕರ ಸಹಕಾರ ಇದ್ದರೆ ಖಂಡಿತವಾಗಿ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಶಾಲೆಗಳೇ ಸಾಕ್ಷಿ. ಸಂಸದ ಡಿ.ಕೆ.ಸುರೇಶ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹಕಾರದೊಂದಿಗೆ ಎರಡೂ ಶಾಲೆಗಳು ಅಭಿವೃದ್ಧಿ ಹೊಂದುತ್ತಿದ್ದು, ಮತ್ತಷ್ಟು ಅಭಿವೃದ್ಧಿ ಮಾಡಲು ಸಿದ್ಧರಿದ್ದೇವೆ.
ರವಿ ಏಳಗಳ್ಳಿ, ತಾಪಂ ಮಾಜಿ ಸದಸ್ಯ
ಏಳಗಳ್ಳಿ ಮತ್ತು ಉಯ್ಯಂಬಳ್ಳಿಗಳಲ್ಲಿ ಗ್ರಾಪಂ ಪಬ್ಲಿಕ್ ಶಾಲೆ ನಡೆಯುತ್ತಿವೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿವೆ. ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಅವಕಾಶ ಕೋರಲಾಗಿದೆ.
ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಕನಕಪುರ