ಕನಕಪುರದಲ್ಲಿ ಗ್ಯಾರಂಟಿ ನೋಂದಣಿಗೆ ಪಾಸ್‌ವರ್ಡ್ ದುರ್ಬಳಕೆ

01 KKP 02
Published on

ಖಾಸಗಿ ಸೈಬರ್ ಕೇಂದ್ರದ ಮೇಲೆ ತಹಸೀಲ್ದಾರ್ ದಾಳಿ

ಕಾನೂನು ಕ್ರಮಕ್ಕೆ ನಾಗರಿಕರ ಒತ್ತಾಯ

ಕನಕಪುರ: ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅಕ್ರಮ ನೋಂದಣಿ ಮಾಡುತ್ತಿದ್ದ ನಗರದ ಅಣ್ಣಾ ಹಜಾರೆ ಸೈಬರ್ ಸೆಂಟರ್ ಮೇಲೆ ತಹಸೀಲ್ದಾರ್ ಡಾ. ಸ್ಮಿತಾ ರಾಮು ಹಾಗೂ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಕೇಂದ್ರದ ನಿರ್ವಾಹಕರಿಗೆ ಎಚ್ಚರಿಕೆ ನೀಡಿದರು.

ತಹಸೀಲ್ದಾರ್, ನಗರಸಭೆ ಪೌರಾಯುಕ್ತ ನೇತೃತ್ವದಲ್ಲಿ ದಾಳಿ ನಡೆಸಿ ಕಂಪ್ಯೂಟರ್ ಹಾಗೂ ಡಿಸ್ಕ್‌ಗಳನ್ನು ಪರಿಶೀಲನೆ ನಡೆಸಿದರು. ಅಣ್ಣಾ ಹಜಾರೆ ಸೈಬರ್ ಸೆಂಟರ್‌ನಲ್ಲಿ ಹೊಸದುರ್ಗ ಗ್ರಾಮ ಪಂಚಾಯಿತಿಯ ಪಾಸ್‌ವರ್ಡ್ ಬಳಕೆ ಮಾಡಿಕೊಂಡು ಅಕ್ರಮವಾಗಿ ನೋಂದಣಿ ಮಾಡುತ್ತಿರುವುದು ಕಂಡು ಬಂದಿದೆ. ದಾಳಿಯ ನಂತರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 


ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್, ನಗರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ್, ನಗರಸಭೆ ನಟರಾಜು ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ಮತ್ತಷ್ಟು ಅಕ್ರಮ
ನಗರದ ಕೆಲವು ಸೈಬರ್ ಸೆಂಟರ್‌ನಲ್ಲಿ ಫಲಾನುಭವಿಗಳಿಂದ ನೋಂದಣಿ ಶುಲ್ಕ ಎಂದು 100 ರೂಪಾಯಿ ಪಡೆದು ವಂಚಿಸಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ವಿವಿಧ ಭಾಗಗಳಲ್ಲಿನ ಸರ್ಕಾರದಿಂದ ಅನುಮತಿ ಪಡೆದ ಗ್ರಾಮ ಒನ್ ಕೇಂದ್ರದಿಂದ ನಗರದ ಇತರ ಸೈಬರ್ ಕೇಂದ್ರಗಳ ನಿರ್ವಾಹಕರಿಗೆ ಪಾಸ್‌ವರ್ಡ್ ನೀಡಿ ಸರ್ಕಾರಕ್ಕೆ ಹಾಗು ಫಲಾನುಭವಿಗಳಿಗೆ ವಂಚಿಸಿ ಅಕ್ರಮವಾಗಿ ಹಣ ವಸೂಲಾತಿ ದಂಧೆಯಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ಪಾಸ್‌ವರ್ಡ್ ನೀಡಿದ ಕೇಂದ್ರದ ಮಾಲೀಕರು ಮತ್ತು ಬೇರೆ ಸೈಬರ್ ಕೇಂದ್ರಗಳಿಗೆ ಪಾಸ್‌ವರ್ಡ್ ನೀಡುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net