ಸರ್ಕಾರದ ವಿರುದ್ಧ ರೈತ ಸಂಘ ಆಕ್ರೋಶ ತಾಲೂಕು ಕಚೇರಿಗೆ ಬೀಗ ಜಡಿಯಲು ಯತ್ನ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

19 KKp 3
Published on

ಕನಕಪುರ

ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತ ಹಾಗೂ ಜನಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ರೈತರು ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ಬೀಗ ಜಡಿಯಲು ಯತ್ನಿಸಿ, ಪ್ರತಿಭಟನೆ ನಡೆಸಿದರು.

ನಗರದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯದಿಂದ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ಥಳದಲ್ಲಿಯೇ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದ ಅಧಿಕಾರಿಗಳು, ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ಪಡುವಂತಾಯಿತು.

ಪ್ರಗತಿಪರ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಹೆಚ್ಚಳ, ಹಾಲು ಉತ್ಪಾದಕ ರೈತರಿಗೆ ಬರೆ ಎಳೆಯುವ ಕೆಲಸ ಮಾಡಿದೆ. ರೈತರು ಹಾಕುವ ಹಾಲಿನ ದರದಲ್ಲಿ 2.85 ಪೈಸೆ ಕಡಿತ ಹಾಗೂ ಹಾಲು ಕೊಂಡುಕೊಳ್ಳುವ ಗ್ರಾಹಕರಿಗೆ ಲೀ.ಗೆ 5 ರೂ.ಹೆಚ್ಚಳ ಅಲ್ಲದೆ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಜನರ ಕಿವಿಗೆ ಹೂವು ಮುಡಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ಜನಸೇವೆ ಮಾಡುವಲ್ಲಿ ವಿಫಲವಾಗಿದೆ. ಸಾರ್ವಜನಿಕರನ್ನು ಕಚೇರಿಗಳಿಗೆ ಅನವಶ್ಯಕವಾಗಿ ಅಲೆಸುವುದು ಹಾಗೂ ಸಣ್ಣ-ಪುಟ್ಟ ಕೆಲಸಗಳಿಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ವೇ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಹಾಗೂ ಸಬ್‌ರಿಜಿಸ್ಟರ್ ಕಚೇರಿಯನ್ನು ಖಾಸಗಿಯವರಿಂದ ಲಕ್ಷಾಂತರ ರೂಪಾಯಿ ಬಾಡಿಗೆಗೆ ಕಟ್ಟುವ ಮೂಲಕ ಜನರ ತೆರಿಗೆಯನ್ನು ಹಾಳು ಮಾಡುತ್ತಿದ್ದಾರೆ. ಆ ಕಚೇರಿಯನ್ನು ತಾಲೂಕು ಕಚೇರಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಹಾರೋಬೆಲೆಯಲ್ಲಿ ತಂಗುದಾಣ ಮುಚ್ಚಿ ಬಾಡಿಗೆ ಅಂಗಡಿ ಮಾಡಿ ಪ್ರಯಾಣಿಕರಿಗೆ ವಂಚನೆ ಮಾಡಿದ್ದಾರೆ. ಅದನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಎಂದಿನಂತೆ ತಂಗುದಾಣವನ್ನು ಉಳಿಸಬೇಕು. ಇಲ್ಲದಿದ್ದರೆ ತಾಪಂ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು, ಮಲ್ಲಿಕಾರ್ಜುನ್, ಕೆ.ಆರ್.ಸುರೇಶ್, ಯುವಶಕ್ತಿ ಶ್ರೀನಿವಾಸ್, ಸಾತನೂರು ಅನುಕುಮಾರ್, ಸೀಬುಕಟ್ಟೆ ಕೃಷ್ಣಪ್ಪ, ದೇವರಾಜು, ಗಜೇಂದ್ರಸಿಂಗ್, ಎಂ.ಡಿ.ಶಿವಕುಮಾರ್, ಶಿವಗೂಳಿಗೌಡ, ವೆಂಕಟೇಶ್, ಬೂವಳ್ಳಿ ನಾರಾಯಣಸ್ವಾಮಿ, ಕನ್ನಡಪರ ಹೋರಾಟಗಾರ ಭಾಸ್ಕರ್, ಬೇಕುಪ್ಪೆ ಕೃಷ್ಣಪ್ಪ, ಕೆಬ್ಬಳ್ಳಿ ಶಿವರಾಜು, ಸಂಪತ್‌ಕುಮಾರ್, ಹಾರೋಬೆಲೆ ಅಂಥೋಣಿ, ಶಿವಲಿಂಗೇಗೌಡ, ರಮೇಶ್, ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಭರ್ಜರಿ ಮೆರವಣಿಗೆ:

ತಾಲೂಕಿನ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಾಜ್ಯ ಸರ್ಕಾರದ ಜನ ವಿರೋಧಿ ಹಾಗೂ ತಾಲೂಕು ಆಡಳಿತದ ಭ್ರಷ್ಟಾಚಾರ ವಿರೋಧಿ ನೀತಿ ಖಂಡಿಸಿ ಮೆರವಣಿಗೆ ನಡೆಸಲಾಯಿತು. ಅಯ್ಯಪ್ಪಸ್ವಾಮಿ ದೇವಾಲಯದ ಮುಂದೆ ಜಮಾವಣೆಗೊಂಡ ನೂರಾರು ರೈತರು, ಪ್ರಗತಿಪರ ಹಾಗೂ ಕನ್ನಡ, ದಲಿತಪರ ಸಂಘಟನೆ ಪದಾಧಿಕಾರಿಗಳು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.

ನಂತರ ಎಂ.ಜಿ ರಸ್ತೆ ಮೂಲಕ, ಚೆನ್ನಬಸಪ್ಪ ವೃತ್ತದಿಂದ ಕೆ.ಎನ್.ಎಸ್ ಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೂ ಘೋಷಣೆ ಕೂಗುತ್ತಾ, ತಾಲೂಕು ಕಚೇರಿ ತಲುಪಿ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net