

ಕನಕಪುರ: ತಾಲೂಕಿನ ಸಾತನೂರು ಪೊಲೀಸರು ಮಾದಕ ವಸ್ತು ಶಂಕಿತ ಮಾರಾಟಗಾರ ಹಾಗೂ ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ.
ಸಾತನೂರಿನ ಸಾಯಿಲ್ ಪಾಷಾ, ಹನುಮಂತನಗರದ ಕುಮಾರ್, ಕಬ್ಬಾಳು ಗ್ರಾಮದ ದೀಪು, ನಾಗರಸನಕೋಟೆ ಗ್ರಾಮದ ಯೋಗೀಶ್ ಬಂಧಿತರು. ಆರೋಪಿ ಡಿ.ಕೆ. ಶಿವನಗರದ ರಾಮು ಪರಾರಿಯಾಗಿದ್ದಾನೆ.
ಸಾತನೂರು-ಚನ್ನಪಟ್ಟಣ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದ ರಸ್ತೆ ತಿರುವಿನಲ್ಲಿ ಭಾನುವಾರ ಬೆಳಗ್ಗೆ ಐದು ಮಂದಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿದ ಸಾತನೂರು ಠಾಣೆ ಎಸ್‌ಐ ಹರೀಶ್ ಮತ್ತು ಸಿಬ್ಬಂದಿ ನಾಲ್ವರನ್ನು ಬಂಧಿಸಿ, ಅವರ ಬಳಿಯಿದ್ದ ಮಾರಕಾಸ್ತ್ರ ಮತ್ತು ಕಾರದ ಪುಡಿ ವಶಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಜಯವಾಣಿ ವರದಿ ಮಾಡಿತ್ತು
ನಗರದ ರೋಟರಿ ಭವನದಲ್ಲಿ ಇತ್ತೀಚೆಗೆ ಪೋಲಿಸ್ ಇಲಾಖೆ ಆಯೋಜಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಪುಂಡಪೋಕರಿ, ಕುಡುಕರು ಹಾಗೂ ಸಮಾಜಘಾತಕರ ಬಗ್ಗೆ ಸುದೀರ್ಘ ಚರ್ಚೆಯಾಗಿತ್ತು. ತಾಲೂಕಿನಾದ್ಯಂತ ಪುಂಡರ ಆಟಾಟೋಪದ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಪುಂಡರ ಆರ್ಭಟ ಶೀಘ್ರ ಮಟ್ಟಹಾಕಿ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಕೆಲವು ಸಮಾಜಘಾತಕರನ್ನು ಬಂಧಿಸಿದ್ದಾರೆ.