

ಎಂ.ಎನ್. ಸುರೇಶ್ ಕನಕಪುರ
ನಗರಸಭೆ ಸುಪರ್ದಿನಲ್ಲಿ 21 ವಾಹನಗಳಿಗೆ ವಿಮೆ ಪಾವತಿ ಮಾಡದೆ ನಗರಸಭೆ ರ್ನಿಲಕ್ಷ$್ಯ ವಹಿಸಿದ್ದು, ಇದರಿಂದ ನಗರದ ಕಸ ಸಂಗ್ರಹಕ್ಕೆ ಸಮಸ್ಯೆಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ತನ್ನ ವಾಹನಗಳಿಗೆ ವಿಮೆ ಕಟ್ಟುವುದು ಅತ್ಯಗತ್ಯವಾಗಿದೆ. ಆದರೆ, ಕೋಟ್ಯಂತರ ರೂ. ಆದಾಯವಿದ್ದರೂ ನಗರಸಭೆ ವಾಹನಗಳಿಗೆ ವಿಮೆ ಕಟ್ಟದಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಕಳೆದ ಮೂರು ದಿನಗಳಿಂದ ವಾಹನಗಳು ನಗರಸಭೆ ಎದುರು ಹಾಗೂ ನೆಲಮಾಳಿಗೆಯಲ್ಲಿ ನಿಂತಿವೆ. ಇದರಿಂದ ನಗರದ ಕೆಲವು ಬಡಾವಣೆಗಳಲ್ಲಿ ಕಸ ಸಂಗ್ರಹವಾಗದೆ ಸ್ವಚ್ಛತೆ ಮಾಯವಾಗಿದೆ. ಇದರಿಂದ ಬಡಾವಣೆ ನಿವಾಸಿಗಳು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರಸಭೆಯಲ್ಲಿ ಕಸ ವಿಲೇವಾರಿ ಮಾಡುವ 14 ಟಾಟಾ ಎಸಿ ವಾಹನಗಳು, 4 ಟ್ರಾ$್ಯಕ್ಟರ್, ಒಂದು ಚಿರಶಾಂತಿ ವಾಹನ ಹಾಗೂ 2 ಜೆಸಿಬಿಗಳಿಗೆ ವಿಮೆ ಕಟ್ಟಿಲ್ಲ. ವಾಹನಗಳಿಗೆ ವಿಮೆ ಕಟ್ಟದಿರುವುದರಿಂದ ಒಂದುವೇಳೆ ಅಪಘಾತವಾದರೆ ಚಾಲಕರು ಮತ್ತು ಗಾಯಗೊಂಡವರಿಗೆ, ಮೃತಪಟ್ಟವರ ಕುಟುಂಬದವರಿಗೆ ವಿಮೆ ಹಣ ಸಿಗುವುದಿಲ್ಲ. ಇದರಿಂದ ನಗರಸಭೆ ನಷ್ಟವೇ ಹೆಚ್ಚು. ವಾಹನಗಳಿಗೆ ವಿಮೆ ಸಮರ್ಪಕವಾಗಿದ್ದರೆ ಅಪಘಾತ ಸಂಭವಿಸಿದರೆ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗುತ್ತದೆ.
ಸಾರ್ವಜನಿಕರ ವಾಹನಗಳನ್ನು ರಸ್ತೆ ಮಧ್ಯದಲ್ಲೇ ತಡೆದು ನಿಲ್ಲಿಸಿ ದಂಡ ಕಟ್ಟುವವರೆಗೂ ಬಿಡದ ಆರ್ಟಿಒ ಅಧಿಕಾರಿಗಳು ಹಾಗೂ ಪೊಲೀಸರು ನಗರಸಭೆ ವಾಹನಗಳ ವಿಮೆ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಸಾರ್ವಜನಿಕರನ್ನು ಹಿಡಿದು ಪ್ರಶ್ನಿಸುವ ಅಧಿಕಾರಿಗಳು ನಗರಸಭೆ ವಾಹನಗಳಿಗೇಕೆ ದಂಡ ವಿಧಿಸುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ನಗರಸಭೆಯ ವಾಹನಗಳಿಗೆ ವಿಮೆ ಇಲ್ಲದಿದ್ದರೆ ಚಾಲಕರು ಹೇಗೆ ಕೆಲಸ ಮಾಡುತ್ತಾರೆ. ಅವರ ಜೀವಕ್ಕೆ ಬೆಲೆ ಇಲ್ಲವೇ, ಕೂಡಲೇ ಇಲ್ಲಿನ ನ್ಯೂನತೆ ಹಾಗೂ ಬೇಜವಾಬ್ದಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನಗರಸಭೆಗೆ ಸಾಕಷ್ಟು ಆದಾಯವಿದ್ದರೂ ವಾಹನಗಳಿಗೆ ವಿಮೆ ಕಟ್ಟಿಲ್ಲ. ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಹೊಸದುರ್ಗ ಪ್ರಶಾಂತ್, ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ
ಪ್ರತಿವರ್ಷ ವಾಹನಗಳ ವಿಮೆ ನವೀಕರಣ ಮಾಡಲಾಗುತ್ತಿದೆ. ಚುನಾವಣೆ ಬಂದಿದ್ದರಿಂದ ವಿಮೆ ಪಾವತಿಸುವುದು ವಿಳಂಬವಾಗಿದೆ. ನಾಳೆಯಿಂದಲೇ ವಾಹನಗಳಿಗೆ ವಿಮೆ ನವೀಕರಿಸಿ ನಿಯಮ ಪಾಲಿಸಲಾಗುವುದು.
ಟಿ.ಡಿ. ಧನಂಜಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ), ಕನಕಪುರ ನಗರಸಭೆ