ಪ್ರತಿನಿತ್ಯ ಪ್ರಯಾಣಿಕರ ಪರದಾಟ ಕನಕಪುರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳ ಪ್ರತಿಭಟನೆ

02 KKP 3
Published on

ಕನಕಪುರ

ಸಾರಿಗೆ ಬಸ್‌ಗಳ ಸಮರ್ಪಕ ಓಡಾಟವಿಲ್ಲದೆ ಪ್ರತಿನಿತ್ಯ ಪರದಾಡುವಂತಾಗಿದೆ ಎಂದು ಪ್ರಯಾಣಿಕರು ನಗರದ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.

ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಬೆಂಗಳೂರಿಗೆ ಕೆಲಸಕ್ಕೆ ತೆರಳುವ ನೌಕರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು.

ಶಾಸಕ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರದಲ್ಲಿಯೇ ಸೇವೆ ಸಮರ್ಪಕವಾಗಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೊಂದರೆ ಅನುಭವಿಸುವಂತಾಗಿದೆ. ಪ್ರತಿನಿತ್ಯ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಯನ್ನು ಕೇಳುವವರೇ ಇಲ್ಲದಂತಾಗಿದೆ. ಇಲ್ಲಿನ ಸಾರಿಗೆ ಅವ್ಯವಸ್ಥೆ ಬಗ್ಗೆ ಹಾಗೂ ಬಸ್ ನಿಲ್ದಾಣದಲ್ಲಿನ ಮೂಲಸೌಲಭ್ಯ ಕೊರತೆ ಬಗ್ಗೆ ಪ್ರತಿಭಟನೆ, ಧರಣಿ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು, ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹೊಸದುರ್ಗ ಪ್ರಶಾಂತ್ ಮಾತನಾಡಿ, ಪ್ರಭಾವಿ ಮುಖಂಡರಿದ್ದರೂ ಸಮಸ್ಯೆ ಬೆಟ್ಟದಷ್ಟಿದೆ. ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಹಲವಾರು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ. ಜತೆಗೆ ಶಕ್ತಿ ಯೋಜನೆ ಜಾರಿಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್‌ಗಳಿಲ್ಲ. ಕನಕಪುರ ಘಟಕದಲ್ಲಿರುವುದು ಗುಜರಿ ಬಸ್‌ಗಳು. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಬಸ್, ಸಿಬ್ಬಂದಿ, ಅಧಿಕಾರಿಗಳ ಕೊರತೆ ಇದೆ. ಸರ್ಕಾರ ಕನಕಪುರ ಘಟಕಕ್ಕೆ ಗುಣಮಟ್ಟದ ಬಸ್‌ಗಳನ್ನು ಒದಗಿಸಬೇಕು. ಕೊರತೆ ಇರುವ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಸಾರ್ವಜನಿಕರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಜಿಲ್ಲಾ ಸಾರಿಗೆ ವಿಭಾಗಾಧಿಕಾರಿ ಪುರುಷೋತ್ತಮ್, ಎಟಿಸಿ ಶುಭಾ, ಸಬ್‌ಇನ್‌ಸ್ಪೆಕ್ಟರ್ ಉಷಾನಂದಿನಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net