ಧರ್ಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು;ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಅಭಿಮತ ಧರ್ಮದ ರಕ್ಷಣೆ ಎಲ್ಲರ ಹೊಣೆ

IMG_20230530_110133_7@-60429258
Published on

ಕನಕಪುರ : ಭಕ್ತಿ ಮಾರ್ಗದ ಮೂಲಕ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ. ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಶ್ರೀ ಕ್ಷೇತ್ರ ಮರಳೆ ಗವಿಮಠದ ಪೀಠಾಧಿಪತಿ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಹೇಳಿದರು.

ಕಸಬಾ ಹೋಬಳಿಯ ಚೌಕಸಂದ್ರ ಗ್ರಾಮದಲ್ಲಿ  ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ, ದುರ್ಗಾಪರಮೇಶ್ವರಿ ಮತ್ತು ಬಾಣಗಳಮ್ಮ ಹಬ್ಬದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಧರ್ಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಬಂಜಾರರ ಕಲೆ ಮತ್ತು ಸಂಸ್ಕೃತಿ ವಿಶೇಷವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಬಂಜಾರರು ಶ್ರಮಜೀವಿಗಳಾಗಿದ್ದು, ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಮರಳೆ ಗವಿಮಠದ ಪೀಠಾಧಿಪತಿ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಹೇಳಿದರು.

ಕಾಯಕ ಮಾಡುವವರಿಗೆ ದಾರಿದ್ರ್ಯ ಬರುವುದಿಲ್ಲ. ಬಂಜಾರರು ಕಾಯಕದಲ್ಲಿ ನಂಬಿಕೆ ಇಟ್ಟವರು. ಜತೆಗೆ ಧರ್ಮ ಉಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಶ್ಲಾಸಿದರು. ಬಂಜಾರರಿಗೂ ಮರಳೆಗವಿ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಶಿಕ್ಷಣ, ವಸತಿ ಊಟ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರೀಮಠ ಬಹಳವಾಗಿ ಶ್ರಮಿಸಿದೆ ಎಂದು ತಿಳಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳನ್ನು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಅರ್ಚಕರಾದ ಗೋಪಾಲನಾಯಕ್, ಸಿ.ಜಿ. ನವೀನ್ ಕುಮಾರ್, ಮುಖಂಡರಾದ ಕೆ.ಬಾಲನಾಯಕ್, ರವಿನಾಯಕ್, ಮಹಾದೇವ ನಾಯಕ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net