ಶುದ್ಧ ನೀರಿನ ಘಟಕ ಶ್ರೀಘ್ರ ದುರಸ್ತಿಯಾಗಲಿ ಕೆಪಿ ದೊಡ್ಡಿ ಗ್ರಾಮಸ್ಥರ ಪಟ್ಟು

Kailancha-Ph-01-KP Doddi Neeru Gatak-Samsye-Photo-11-7-2023
Published on

ಕೈಲಾಂಚ (ರಾಮನಗರ)

ಕೈಲಾಂಚ ಹೋಬಳಿಯ ಕೆಪಿ ದೊಡ್ಡಿ ಗ್ರಾಮದಲ್ಲಿನ ನೀರಿನ ಘಟಕ ಕೆಟ್ಟು ಜನರಿಗೆ ಕುಡಿಯಲು ಶುದ್ಧ ನೀರು ಇಲ್ಲವಾಗಿದ್ದು ಕೂಡಲೇ ಘಟಕ ದುರಸ್ತಿಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ ಅಪೆಕ್ಸ್​ ಅಸೋಸಿಯೇಟ್ಸ್​ ಅಡಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಘಟಕ ಕಾರ್ಯನಿರ್ವಹಿಸುತ್ತಿತ್ತು. ಒಂದು ತಿಂಗಳಿಂದ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಹತ್ತಿರದಲ್ಲಿರುವ ಹುಣಸನಹಳ್ಳಿ ಘಟಕ ಕೂಡ ರಿಪೇರಿ ಭಾಗ್ಯ ಕಂಡಿಲ್ಲ. ನೀರು ಬೇಕೆಂದರೆ ನಾಲ್ಕು ಕಿ.ಮೀ. ದೂರದ ಕೈಲಾಂಚ ಇಲ್ಲವೇ ಮೊಟ್ಟೆದೊಡ್ಡಿ ಗ್ರಾಮಕ್ಕೆ ಹೋಗಿ ತರಬೇಕು ಎಂಬುದು ಗ್ರಾಮಸ್ಥರ ದೂರು.

ನೀರಿನ ಘಟಕ ಕೆಟ್ಟುಹೋಗಿರುವುದರಿಂದ ಬೋರ್​ವೆಲ್​ ನೀರು ಕುಡಿಯುವಂತಾಗಿದೆ. ಈ ಭಾಗದಲ್ಲಿ ಅಂತರ್ಜಲ ಕೆಳಮಟ್ಟದಲ್ಲಿದ್ದು, ನೀರು ಫ್ಲೋರೈಡ್ ​ಯುಕ್ತವಾಗಿದೆ. ಈ ನೀರನ್ನು ಕುಡಿದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ಗ್ರಾಮಸ್ಥರು.

ಘಟಕ ನಿರ್ಮಾಣ ಆದ ಮೇಲೆ ಶುದ್ಧ ನೀರಿಗೆ ಜನರು ಹೊಂದಿಕೊಂಡಿದ್ದಾರೆ. ಜನರಿಗೆ ಅಗತ್ಯವಾಗಿ ನೀರಿನ ಘಟಕ ಬೇಕಾಗಿದೆ. ಕಾಲಕಾಲಕ್ಕೆ ಘಟಕ ನಿರ್ವಹಣೆ ಕಾಣದೆ ಯಂತ್ರಗಳು ಕೆಟ್ಟಿವೆ ಗ್ರಾಪಂ, ಜಿಪಂ ತಮ್ಮ ಸುಪರ್ದಿಗೆ ಘಟಕವನ್ನು ವಹಿಸಿಕೊಂಡು ನಿರ್ವಹಣೆ ಮಾಡುತ್ತಿಲ್ಲ. ಘಟಕದ ಯಂತ್ರೋಪಕರಣ ರಿಪೇರಿ ಮಾಡಿಸಿ ಜನರಿಗೆ ಶುದ್ಧ ನೀರು ಒದಗಿಸಲು ಜಿಪಂ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಪಂ ಸದಸ್ಯ ಪ್ರಕಾಶ್​, ವಿಎಸ್​ಎಸ್​ಎನ್​ ಸದಸ್ಯ ಗೋಪಾಲ್​, ಗ್ರಾಮಸ್ಥರಾದ ಪುನೀತ್​, ಪ್ರಭು, ಗೋಪಾಲ್​, ಗಿರೀಶ್​, ನಟರಾಜ್​ ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net