

ಕೈಲಾಂಚ
ನೆಮ್ಮದಿ ಬೇರೆಲ್ಲೂ ಇಲ್ಲ, ನಮ್ಮಲ್ಲಿರುವ ನೆಮ್ಮದಿ ಕಾಣುವ ಪ್ರಕ್ರಿಯೆಯೇ ಇಷ್ಟಲಿಂಗ ಪೂಜಾ ಪರಿಕಲ್ಪನೆ ಎಂದು ಚನ್ನಪಟ್ಟಣ ಬೇವೂರು ಮಠಾಧ್ಯಕ್ಷ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಅಂಜನಾಪುರದ ಬಸವೇಶ್ವರ ದೇವಾಲಯದ ಆವರಣದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು, ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ತಾಲೂಕು ಮತ್ತು ವೀರಶೈವ ಯುವಕ ಸಂಘ ರಾಮನಗರ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಧರ್ಮ ಪ್ರಸಾರ ಹಾಗೂ ಶಿವದೀಕ್ಷೆ-ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಹದ ಮೇಲೆ ಲಿಂಗ ಕಟ್ಟಿ ಸುಮ್ಮನಿದ್ದರೆ ನಮಗೆ ಯಾವ ಯೋಗವೂ ಸಿಗುವುದಿಲ್ಲ. ಇಷ್ಟಲಿಂಗ ಪೂಜೆ ಮಾಡಿ, ಆಚರಣೆ ಮಾಡಿದಾಗ ಅದರ ಫಲ ಸಿಕ್ಕೇ ಸಿಗುತ್ತದೆ. ಇಷ್ಟಲಿಂಗ ಪೂಜೆಯಿಂದ ಮನಸ್ಸಿಗೆ ಏಕಾಂತ ಸಿಕ್ಕಿ, ನಮ್ಮ ಅಂತರಂಗ ಶುದ್ಧಿ ಮಾಡುತ್ತದೆ. ದೇವರನ್ನು ನಾವು ಇಷ್ಟಲಿಂಗದಲ್ಲೇ ಕಾಣಬಹುದು. ಇಷ್ಟಲಿಂಗ ಪೂಜೆ ನಮಗೆ ಒಳ್ಳೆಯ ಸಂಸ್ಕಾರ, ಆಚಾರ-ವಿಚಾರ ಕಲಿಸುತ್ತದೆ. ಯುವಪೀಳಿಗೆ ಪೂಜೆ ಕೈಗೊಂಡು ಪ್ರತಿದಿನ ಅಂಗದ ಮೇಲಿರುವ ಲಿಂಗ ಕಳಚಿಡದೆ ಪೂಜೆ ಮಾಡಬೇಕು ಎಂದರು.
ಸುತ್ತೂರು ಶಾಖಾ ಮಠದ ಶ್ರೀ ಸೋಮಶೇಖರ್ ಸ್ವಾಮೀಜಿ ಮಾತನಾಡಿ, ಧರ್ಮದ ಅರಿವು ಮೂಡಿಸಲು, ಯುವ ಪೀಳಿಗೆಗೆ ವೀರಶೈವ ಧರ್ಮದ ಸಾರ ತಿಳಿಸಲು, ಇಷ್ಟಲಿಂಗ ಪೂಜೆ ಮಹತ್ವ ಸಾರುವ ಉದ್ದೇಶದಿಂದ ವೀರಸಿಂಹಾಸನ ಮಹಾಸಂಸ್ಥಾನ ಮಠ ಮೈಸೂರು ಇವರ ಆಶ್ರಯದಲ್ಲಿ ತಾಲೂಕಿನ ಗ್ರಾಮಗಳಲ್ಲಿ ಧರ್ಮಪ್ರಚಾರ ಮತ್ತು ಶಿವದೀಕ್ಷೆ-ಲಿಂಗದೀಕ್ಷೆ ಕಾರ್ಯಕ್ರಮವನ್ನು ಜು.7ರಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಚನ್ನಪಟ್ಟಣ ಕುಡಿನೀರು ಕಟ್ಟೆ ವಿರಕ್ತ ಮಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ, ರೇವಣಸಿದ್ದೇಶ್ವರ ಬೆಟ್ಟ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು. ಯುವಕ-ಯುವತಿಯರು ಸೇರಿ 96 ಮಂದಿ ಲಿಂಗದೀಕ್ಷೆ ಪಡೆದರು.
ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಪೊಲೀಸ್ ಶಂಕರಪ್ಪ, ವೀರಶೈವ ಸಂಘ ತಾಲೂಕು ಅಧ್ಯಕ್ಷ ಎಂ.ಆರ್.ಶಿವಕುಮಾರಸ್ವಾಮಿ, ಮುಖಂಡರಾದ ವಿಎಸ್ಸೆಸ್ಸೆನ್ ಅಧ್ಯಕ್ಷ ಶಿವಕುಮಾರಸ್ವಾಮಿ, ಸಿದ್ದವೀರಯ್ಯ, ಬಸವರಾಜು, ನಾಗರಾಜು, ಕೆಂಗಲ್ಲಯ್ಯ, ಜಯಶಂಕರ್, ಮೈಕ್ ನಾಗರಾಜು, ಪೊಲೀಸ್ ಶಿವಕುಮಾರ್, ಕಂಡಕ್ಟರ್ ಮಹದೇವ್, ಶಿವರುದ್ರಯ್ಯ ಇದ್ದರು.
ರಾಜ್ಯದ ಹೊರಗೂ ಧರ್ಮ ಪ್ರಸಾರ
ಧರ್ಮತತ್ವ, ದೀಕ್ಷಾ ಸಂಸ್ಕಾರ, ಲಿಂಗಧಾರಣೆ ಮಹತ್ವ ತಿಳಿಸಿ, ಅಶಕ್ತರಿಗೆ ದೀಕ್ಷೆ, ಲಿಂಗಧಾರಣೆ ಮಾಡಲಾಗುತ್ತಿದೆ. ಪ್ರತೀ ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೆಚ್ಚಾಗಿ ಯುವಕರು ಇಷ್ಟಲಿಂಗ ದೀಕ್ಷೆ ಪಡೆಯುತ್ತಿರುವುದು ವಿಶೇಷ. ಈಗಾಗಲೇ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವು ಜಿಲ್ಲೆಗಳು, ಹೊರರಾಜ್ಯಗಳಾದ ತಮಿಳುನಾಡು, ಕೇರಳ ಭಾಗಗಳಲ್ಲೂ ಧರ್ಮ ಪ್ರಸಾರ ಮಾಡಿ 87,453ಕ್ಕೂ ಹೆಚ್ಚಿನವರಿಗೆ ಲಿಂಗಧೀಕ್ಷಾ ಸಂಸ್ಕಾರ ನೀಡಲಾಗಿದೆ ಎಂದು ಸುತ್ತೂರು ಶಾಖಾ ಮಠದ ಶ್ರೀ ಸೋಮಶೇಖರ್ ಸ್ವಾಮೀಜಿ ತಿಳಿಸಿದರು.