ಕೈಲಾಂಚ ಗುನ್ನೂರಿನಲ್ಲಿ ಶವಸಂಸ್ಕಾರಕ್ಕೆ ಜಾಗದ ಅಡ್ಡಿ

Kailancha-Ph-001-Gunnur Smasana Samasye Police And Revinyu Dept. Visit Gunnur News - 30-07-2023
Published on

ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು ಶವ ಹೂಳಲು ಬೇರೆಡೆ ಗುಂಡಿ ತೆಗೆಯಿರಿ ಎಂದಿದ್ದೇ ಕಾರಣ

ಕೈಲಾಂಚ
ಶವಸಂಸ್ಕಾರ ಸಂಬಂಧ ಉಂಟಾಗಿದ್ದ ಸಮಸ್ಯೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರಾಮನಗರ ಗ್ರಾಮಾಂತರ ಪೊಲೀಸರು ಬಗೆಹರಿಸಿದ್ದಾರೆ.
ಕೈಲಾಂಚ ಹೋಬಳಿಯ ಗುನ್ನೂರು ಗ್ರಾಮದ ದಲಿತ ಸಮುದಾಯದ ಗವಿಸಿದ್ದಯ್ಯ (85) ಶನಿವಾರ ರಾತ್ರಿ ನಿಧನರಾಗಿದ್ದರು. ಭಾನುವಾರ ಶವಸಂಸ್ಕಾರ ಮಾಡಲು ಗ್ರಾಮದ ಗುಂಡು ತೋಪಿನಲ್ಲಿ ಗುಂಡಿ ತೋಡಲಾಗಿತ್ತು. ಈ ವೇಳೆ ಪಕ್ಕದ ಜಮೀನಿನವರು ಗುಂಡಿ ತೆಗೆದಿರುವ ಜಾಗ ನಮ್ಮದು, ಓಡಾಡಲು ಸಮಸ್ಯೆ ಆಗುತ್ತದೆ. ಪಕ್ಕದಲ್ಲಿ ತೆಗೆಯಿರಿ ಎಂದು ಹೇಳಿದ್ದಾರೆ. ಗುಂಡುತೋಪು ದಲಿತರು ಶವಸಂಸ್ಕಾರ ಮಾಡಲು ಇರುವ ಜಾಗ ಎಂದು ಸಮುದಾಯದ ಮುಖಂಡರು, ಶವಸಂಸ್ಕಾರಕ್ಕೆ ಅಡ್ಡಿಪಡ್ಡಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ಹಾಗೂ ಪೊಲೀಸರಿಗೆ ಕರೆ ಮಾಡಿದ್ದಾರೆ.

ವಿಷಯ ತಿಳಿದ ರಾಮನಗರ ಗ್ರಾಮಾಂತರ ಠಾಣೆ ಸಬ್​ಇನ್​ಸ್ಪೆಕ್ಟರ್​ ಜಾರ್ಜ್​ ಪ್ರಕಾಶ್​ ಮತ್ತು ಕೈಲಾಂಚ ರಾಜಸ್ವ ನಿರೀಕ್ಷಕ ಪುಟ್ಟರಾಜು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಗ್ರಾಮದ ಮುಖಂಡರು, ದಲಿತ ಮುಖಂಡರು, ಗ್ರಾಪಂ ಸದಸ್ಯ ಗಿರೀಶ್​ ಜತೆ ಚರ್ಚಿಸಿದ ಪೊಲೀಸ್​ ಮತ್ತು ಕಂದಾಯ ಅಧಿಕಾರಿಗಳು ಜಾಗದ ಸಮಸ್ಯೆ ಬಗೆಹರಿಸಿ ಗುಂಡಿ ತೆಗೆದ ಜಾಗದಲ್ಲೇ ಶವಸಂಸ್ಕಾರ ನಡೆಸುವಂತೆ ತಿಳಿಸಿ ಸಮಸ್ಯೆಗೆ ಇತಿಶ್ರೀ ಹಾಡಿದರು. ನಂತರ ಮಧ್ಯಾಹ್ನದ ಹೊತ್ತಿಗೆ ಗವಿಸಿದ್ದಯ್ಯ ಅಂತ್ಯಸಂಸ್ಕಾರ ಮಾಡಲಾಯಿತು.

ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಇದುವರೆಗೂ ಯಾರೂ ಅಡ್ಡಿಪಡಿಸಿಲ್ಲ. ಪಕ್ಕದ ಜಮೀನಿನವರು ತಿರುಗಾಡಲು ಸಮಸ್ಯೆ ಆಗುತ್ತದೆ ಎಂದು ಶವಸಂಸ್ಕಾರಕ್ಕೆ ಬೇರೆ ಕಡೆ ಗುಂಡಿ ತೆಗೆಯುವಂತೆ ಮನವಿ ಮಾಡಿದರು ಅಷ್ಟೇ. ಆದರೆ ಇದನ್ನು ಸಮಸ್ಯೆ ಎಂಬಂತೆ ಬಿಂಬಿಸಲಾಗಿದೆ. ಇಲ್ಲಿ ಜಾಗದ ಸಮಸ್ಯೆ ಇಲ್ಲ. ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ.
ಗಿರೀಶ್​, ಗ್ರಾಪಂ ಸದಸ್ಯ, ಗುನ್ನೂರು


ಗುನ್ನೂರು ಸ್ಮಶಾನ ಜಾಗಕ್ಕೆ ಕಂದಾಯ ಇಲಾಖೆ 1.04 ಎಕರೆ ಪ್ರದೇಶ ಭೂಮಿ ಮಂಜೂರು ಮಾಡಿದೆ. ಅಳತೆ ಮಾಡಿ ಜಾಗ ಗುರುತಿಸಲಾಗಿದೆ. ಶವಸಂಸ್ಕಾರ ಮಾಡಲು ಸಮಸ್ಯೆ ಉಂಟಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಪಂಚಾಯಿತಿಯವರು ಸ್ಮಶಾನ ಅಭಿವೃದ್ಧಿಪಡಿಸಿ ಕಾಂಪೌಂಡ್​ ನಿರ್ಮಿಸಿದರೆ ಮುಂದೆ ಇಂತಹ ಸಮಸ್ಯೆ ಉಂಟಾಗುವುದಿಲ್ಲ.
ಪುಟ್ಟರಾಜು, ರಾಜಸ್ವ ನಿರೀಕ್ಷಕ, ಕೈಲಾಂಚ

ಶವಸಂಸ್ಕಾರಕ್ಕೆ ಮಗನೇ ಇಲ್ಲ!
ಇತ್ತ ಸ್ಮಶಾನ ಜಾಗದ ಸಮಸ್ಯೆ ಒಂದು ಕಡೆಯಾದರೆ ಮನೆ ಬಿಟ್ಟು ಹೋಗಿರುವ ಗವಿಸಿದ್ದಯ್ಯ ಅವರ ಮಗ ಸುರೇಶ್​ ಅಪ್ಪನ ಶವಸಂಸ್ಕಾರಕ್ಕೆ ಬರುತ್ತಾನೆ ಎಂದು ಕಾದು ಕುಳಿತ ಕುಟುಂಬಕ್ಕೆ ನಿರಾಸೆ ಉಂಟಾಯಿತು. 15 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿರುವ ಸುರೇಶ್​ ಮೂರು, ನಾಲ್ಕು ವರ್ಷಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಆತ ಕೊಟ್ಟಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿದರೆ ಸ್ವಿಚ್ಡ್​ ಆಫ್ ಬಂದಿದೆ. ಅಪ್ಪನ ಸಾವು ತಿಳಿದು ಮಗ ಬರಬಹುದು ಎಂದು ಕುಟುಂಬ ಭಾನುವಾರ ಮಧ್ಯಾಹ್ನದವರೆಗೂ ಕಾದಿತ್ತು. ಆದರೆ ಮಗ ಬರುವ ಸುಳಿವು ಕಾಣದೆ ಶವಸಂಸ್ಕಾರ ಮಾಡಿ ಮುಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net