ಹಂದಿಗೊಂದಿ ಅರಣ್ಯದ ಆಸುಪಾಸಿನಲ್ಲಿ ಒಂಟಿ ಆನೆ ಉಪಟಳ

Elephant
ಸಾಂದರ್ಭಿಕ ಚಿತ್ರ
Published on

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯದ ಬಳಿ ಗುರುವಾರ ಇಬ್ಬರನ್ನು ಬಲಿಪಡೆದಿದ್ದ ಕಿಲ್ಲರ್ ಆನೆಯನ್ನು ಸೆರೆಹಿಡಿದ ಬೆನ್ನಲ್ಲೇ ಹಂದಿಗೊಂದಿ ಅರಣ್ಯ ಪ್ರದೇಶದ ಸುತ್ತಮುತ್ತ ರೈತರ ಜಮೀನಿಗೆ ಲಗ್ಗೆ ಇಟ್ಟು, ಪಂಪ್‌ಹೌಸ್ ಪರಿಕರಗಳನ್ನು ಧ್ವ್ವಂಸಗೊಳಿಸುತ್ತಿರುವ ಒಂಟಿ ಸಲಗವನ್ನು ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬನ್ನೇರುಘಟ್ಟ ಇಲ್ಲವೇ, ಕಾವೇರಿ ವನ್ಯಜೀವಿಧಾಮದಿಂದ ಬಂದಿರುವ ಆನೆ ಇದಾಗಿದ್ದು, 25 ದಿನಗಳಿಂದ ಹಂದಿಗೊಂದಿ ಅರಣ್ಯದಲ್ಲಿ ಬೀಡುಬಿಟ್ಟಿದೆ. ಕಳೆದ ವರ್ಷದಿಂದ ಆಗಾಗ ಕಾರ್ಯಾಚರಣೆಯಲ್ಲಿ ಸ್ವಸ್ಥಾನ ಸೇರಿ ಮತ್ತೆ ವಾಪಸ್ ಬರುತ್ತಿರುವ ಆನೆ, ಬೆಳಗ್ಗೆ ಹುಣಸನಹಳ್ಳಿ, ತುಂಬೇನಹಳ್ಳಿ ರಸ್ತೆ, ಸಂಜೆ ವೇಳೆ ಗ್ರಾಮಗಳ ಸಮೀಪ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಗೂ ತಲೆಬಿಸಿ ಮಾಡಿದೆ.

ಗುನ್ನೂರು, ಸಿಂಗಸಂದ್ರ, ತುಂಬೇನಹಳ್ಳಿ, ಕೇತೋಹಳ್ಳಿ, ನಾಗೋಹಳ್ಳಿ, ಅಣ್ಣಹಳ್ಳಿ ಭಾಗಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಗ್ರಾಮಗಳ ವ್ಯಾಪ್ತಿಯಲ್ಲಿ ದಾಳಿ ನಡೆಸುತ್ತಿದೆ. ಬೆಳೆ ನಾಶಕ್ಕೆ ತಲೆಕೆಡಿಸಿಕೊಳ್ಳದ ರೈತರು, ವಿದ್ಯುತ್ ಪೆಟ್ಟಿಗೆ ನಾಶಕ್ಕೆ ಹೆದರುವಂತಾಗಿದೆ. 2 ವರ್ಷಗಳ ಹಿಂದೆ ತುಂಬೇನಹಳ್ಳಿ ಜಮೀನೊಂದರಲ್ಲಿ ವಿದ್ಯುತ್ ಟ್ರಾನ್‌ಸ್ಾರ್ಮರ್ ತಂತಿ ತಗುಲಿ ಆನೆಯೊಂದು ಮೃತಪಟ್ಟಿತ್ತು. ಜಮೀನಿನಲ್ಲಿ ವನ್ಯಪ್ರಾಣಿಗಳಿಗೆ ಸಮಸ್ಯೆ ಉಂಟಾದಾಗ ವನ್ಯಜೀವಿ ಕಾಯ್ದೆ ಪ್ರಕಾರ ಜಮೀನಿನ ರೈತರ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸುವುದರಿಂದಲೂ ರೈತರು ಹೆದರುತ್ತಿದ್ದಾರೆ.

ತುಮಕೂರು ಕಡೆ ಹೋಗಿ ವಾಪಸ್

ಹಿಂಡಿನಿಂದ ಬೇರ್ಪಟ್ಟು ಓಡಾಡುತ್ತಿರುವ ಈ ಆನೆ, ಕಾರ್ಯಾಚರಣೆ ನಡೆಸಿದರೂ ವಾಪಸ್ ಬರುತ್ತಿದೆ. ಕಳೆದ ತಿಂಗಳು ಮಾಗಡಿವರೆಗೆ ಹೋಗಿ ವಾಪಸ್ ಬಂದಿದೆ. ನಾಲ್ಕು ತಿಂಗಳ ಹಿಂದೆ ಹುಲಿಯೂರುದುರ್ಗ, ಕುಣಿಗಲ್, ತುಮಕೂರು ಅರಣ್ಯ ಭಾಗಕ್ಕೂ ಲಗ್ಗೆ ಇಟ್ಟು, ಮತ್ತೆ ವಾಪಸ್ ಬಂದಿದೆ.

ವಿದ್ಯುತ್ ಪರಿಕರಗಳಿಗೆ ಹಾನಿ ಮಾಡುತ್ತಿದೆ. ಇದರಿಂದ ಆನೆಗೆ ಸಮಸ್ಯೆ ಉಂಟಾದರೆ ರೈತರು ಅದರ ಹೊಣೆ ಹೊರಬೇಕಿದೆ. ತಮ್ಮದಲ್ಲದ ತಪ್ಪಿಗೆ ರೈತರು ಗುರಿಯಾಗುವಂತಾಗಿದೆ. ಕೂಡಲೇ ಒಂಟಿ ಆನೆ ಉಪಟಳ ತಪ್ಪಿಸಿ.

ನಂಜಪ್ಪ, ರೈತ ಸಂಘಟನೆ ಮುಖಂಡ, ತುಂಬೇನಹಳ್ಳಿ.

ಆನೆಯನ್ನು ಸ್ವಸ್ಥಾನ ಸೇರಿಸುವ ಕೆಲಸವನ್ನು ಇಲಾಖೆ ಮಾಡುತ್ತಲೇ ಇದೆ. ಪ್ರತಿದಿನ ಅದರ ಚಲನವಲನದ ಮೇಲೆ ನಿಗಾ ಇಡಲಾಗಿದೆ. ಒಂಟಿ ಆನೆ ಸೆರೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈಗಾಗಲೇ ಹಂದಿಗೊಂದಿ ಅರಣ್ಯದಂಚಿನಲ್ಲಿ ಉಪಟಳ ನೀಡುತ್ತಿರುವ ಒಂಟಿ ಆನೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ದಿನೇಶ್, ವಲಯ ಅರಣ್ಯಾಧಿಕಾರಿ, ರಾಮನಗರ

ಆನೆ ದಾಳಿಯಿಂದ ಅಪಾರ ನಷ್ಟ!

ತುಂಬೇನಹಳ್ಳಿಯಲ್ಲಿ ಬುಧವಾರ ರಾತ್ರಿ ದಾಳಿ ನಡೆಸಿರುವ ಒಂಟಿ ಆನೆ, ಪದ್ಮಮ್ಮ, ನಂಜುಂಡಿ, ಬೋರಯ್ಯ, ಶಿವಣ್ಣ, ಪ್ರಕಾಶ್ ಎಂಬುವವರ ಪಂಪು-ಮೋಟಾರ್, ತೆಂಗು, ಮಾವಿನಮರ, ಜೋಳ, ರಾಗಿ, ಕಾಂಪೌಂಡ್ ನಾಶಪಡಿಸಿದೆ. ಮಂಗಳವಾರ ರಾತ್ರಿ ಜವಗೆರೆದೊಡ್ಡಿ ಗ್ರಾಮದ ತಾಯಮ್ಮ, ವಾಸು ಎಂಬುವವರ ತೆಂಗು, ಅಡಕೆ ಮರಗಳಿಗೆ ಹಾನಿಯುಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net