

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಹೋಬಳಿಯ ಹುಣಸನಹಳ್ಳಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಚೆಕ್ಡ್ಯಾಂ ಬ್ರಿಡ್ಜ್ ಮೇಲಿನ ಕಂಬಗಳು ಒಂದೊಂದೇ ಮುರಿದು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸಂಬಂಧಪಟ್ಟ ಇಲಾಖೆ ಸೇತುವೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿ ರಕ್ಷಣೆ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೊಟ್ಟೆದೊಡ್ಡಿ ಗೇಟ್ ಕನಕಪುರ&ರಾಮನಗರ ರಸ್ತೆಯಿಂದ ಹುಣಸನಹಳ್ಳಿಗೆ ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ಅಡ್ಡಲಾಗಿ ಹಲವು ವರ್ಷಗಳ ಹಿಂದೆ ಚೆಕ್ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಬ್ರಿಡ್ಜ್ ನಿರ್ಮಾಣದಿಂದ ಹುಣಸನಹಳ್ಳಿ, ತುಂಬೇನಹಳ್ಳಿ ಭಾಗದ ಜನ ಸುತ್ತಿ ಬಳಸಿ ಸಂಚರಿಸುವುದು ತಪ್ಪಿದೆ. ಮೊದಲು ನದಿ ನೀರಿನಲ್ಲೇ ನಡೆದು ದಾಟಬೇಕಿತ್ತು. ಬ್ರಿಡ್ಜ್ ನಿರ್ಮಾಣವಾದ ಮೇಲೆ ಜನರ ಓಡಾಟ ಸಲೀಸಾಗಿದೆ. ಆದರೆ, ಸೇತುವೆ ಎರಡೂ ಬದಿಯಲ್ಲಿ ಭದ್ರತೆಗಾಗಿ ಸಿಮೆಂಟ್ ಕಂಬಗಳನ್ನು ಅಳವಡಿಸಿದ್ದು, ನದಿ ತುಂಬಿ ಹರಿದಾಗ ಈ ಸೇತುವೆ ಮೇಲೆ ಐದಾರು ಅಡಿ ನೀರು ಹರಿಯುತ್ತದೆ.
ಜತೆಗೆ ಕಂಬಗಳ ಬಳಿ ಕಸ ಕಡ್ಡಿ ಸೇರುತ್ತದೆ. ನೀರು ರಭಸವಾಗಿ ಹರಿದಾಗ ರಕ್ಷಣೆಗೆಂದು ಅಳವಡಿಸಿದ್ದರೂ ಸಿಮೆಂಟ್ ಕಂಬಗಳು ಒಂದೊಂದೇ ಮುರಿದು ಬೀಳುತ್ತಿವೆ. ಈಗಾಗಲೇ ಶೇ.80 ಕಂಬಗಳು ಮುರಿದಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಸೇತುವೆಯಲ್ಲಿ ಮೂರ್ನಾಲ್ಕು ಕಡೆ ತಿರುವುಗಳಿದ್ದು, ಸೇತುವೆ ಮಟ್ಟಕ್ಕೆ ಡ್ಯಾಂನಲ್ಲಿ ನೀರು ಸಂಗ್ರಹವಾದಾಗ ಸೇತುವೆ ಕಾಣದೆ ಅನಾಹುತ ಸಂಭವಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಕನಕಪುರ&ರಾಮನಗರ ರಸ್ತೆಗೆ ಹುಣಸನಹಳ್ಳಿ ಭಾಗದ ಗ್ರಾಮಗಳಿಂದ ಬಂದು ಬಸ್ ಸಂಪರ್ಕ ಪಡೆಯುತ್ತಾರೆ. ಇವರ ಸುರಕ್ಷತೆ ದೃಷ್ಟಿಯಿಂದ ಸೇತುವೆಯ ಎರಡೂ ಬದಿ ಎತ್ತರಕ್ಕೆ ತಡೆಗೋಡೆ ನಿರ್ಮಿಸಿ ಜನರ ಸುರಕ್ಷತೆಗೆ ಒತ್ತು ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪಂಚಾಯಿತಿಗೆ ಆರ್ಥಿಕ ಹೊರೆ
ಸೇತುವೆಯಲ್ಲಿ ಚಿಕ್ಕ ಪೈಪ್ ಅಳವಡಿಸಿರುವ ಕಾರಣ ನದಿಯಲ್ಲಿ ನೀರು ಹೆಚ್ಚಾದಾಗ ಸರಾಗವಾಗಿ ಹರಿಯದೆ ಸೇತುವೆ ಮೇಲೆ ಗಿಡ&ಗಂಟಿಗಳು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಜತೆಗೆ ಸೇತುವೆ ಅಕ್ಕಪಕ್ಕ ನದಿಯಲ್ಲಿ ಬೆಳೆಯುವ ಗಿಡಗಳು ಬೃಹತ್ತಾಗಿ ಬೆಳೆದು ನಿಲ್ಲುತ್ತವೆ. ಸೇತುವೆ ಮೇಲೆ ಓಡಾಡುವವರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಗ್ರಾಮ ಪಂಚಾಯಿತಿಯೇ ಆಗಾಗ ಸೇತುವೆಯನ್ನು ನಿರ್ವಹಣೆ ಮಾಡುತ್ತಿದೆ. ಇದರಿಂದ ಗ್ರಾಪಂಗೆ ಆರ್ಥಿಕ ಹೊರೆಯಾಗಿದೆ. ಸೇತುವೆಯ ಎರಡೂ ಬದಿ ಗ್ರಿಲ್ ಅಳವಡಿಸಲು ಪಂಚಾಯಿತಿಯಿಂದ ಹಣ ಒದಗಿಸಲು ಆಗದ ಕಾರಣ ಸಂಬಂಧಪಟ್ಟ ಇಲಾಖೆಯನ್ನು ಕಾಯುವಂತಾಗಿದೆ ಎನ್ನುತ್ತಾರೆ ಹುಣಸನಹಳ್ಳಿಯ ಮುತ್ತುರಾಜ್.
ಹಿಂದೆ ಸೇತುವೆ ನಿರ್ಮಿಸಿದಾಗ ವೈಜ್ಞಾನಿಕವಾಗಿ ತಡೆ ಕಂಬಗಳನ್ನು ನಿರ್ಮಾಣ ಮಾಡಿಲ್ಲ. ಗುಣಮಟ್ಟ ಕಳಪೆಯಾಗಿರುವುದರಿಂದ ಕಂಬಗಳು ಮುರಿದು ಬೀಳುತ್ತಿವೆ. ಜನರು ಅಪಾಯದಲ್ಲೇ ಸೇತುವೆ ಮೇಲೆ ಸಂಚರಿಸಬೇಕಿದೆ. ಎರಡೂ ಕಡೆ ಕಬ್ಬಿಣದ ಗ್ರಿಲ್ ಅಳವಡಿಸಿ ಸುರತ ಸಂಚಾರಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಪುಟ್ಟಸ್ವಾಮಿ, ಅಧ್ಯಕ್ಷ, ಹುಣಸನಹಳ್ಳಿ ಗ್ರಾಪಂ
ಹುಣಸನಹಳ್ಳಿ ಬ್ರಿಡ್ಜ್ ಸಮಸ್ಯೆ ಬಗ್ಗೆ ಇಲಾಖೆ ಗಮನಕ್ಕೆ ಬಂದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಕಳಿಸಲಾಗುತ್ತದೆ. ಅನುದಾನ ಬಂದ ನಂತರ ಇಲಾಖೆ ಮುಂದಿನ ಕ್ರಮ ಕೈಗೊಳ್ಳುತ್ತದೆ.
ಯಶ್ವಂತ್, ಇಂಜಿನಿಯರ್, ಕಾವೇರಿ ನೀರಾವರಿ ನಿಗಮ