

ಕೈಲಾಂಚ (ರಾಮನಗರ)
ಹೋಬಳಿಯ ಗುನ್ನೂರು ಗ್ರಾಮದ ಸಮೀಪವಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ವರ್ಗಾವಣೆಗೊಂಡಿರುವ ಪ್ರಾಂಶುಪಾಲರೇ ಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಾಲೆಯ ಪ್ರಾಂಶುಪಾಲೆ ಜಯಲಕ್ಷ್ಮೀ ಅವರ ಪತಿ ಮೂರ್ನಾಲ್ಕು ದಿನಗಳ ಹಿಂದೆ ವಸತಿ ಶಾಲೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಕ್ಕಳು ಹಲ್ಲೆ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಹೊರಗಿನ ವ್ಯಕ್ತಿಯ ಕೃತ್ಯ ಮೇಲ್ನೋಟಕ್ಕೆ ದೃಢಪಟ್ಟಿದ್ದರಿಂದ ಜಯಲಕ್ಷ್ಮೀ ಅವರನ್ನು ಹಾಸ್ಟೆಲ್ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಚಕ್ಕೆರೆ ವಸತಿ ಶಾಲೆಯ ಪ್ರಾಂಶುಪಾಲ ಹನುಮಂತಯ್ಯ ಅವರಿಗೆ ಹೆಚ್ಚುವರಿ ಹೊಣೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಮಕ್ಕಳು ಬೆಳಗಿನ ತಿಂಡಿ ತಿನ್ನದೆ, ಜಯಲ್ಷ್ಮೀ ಅವರೇ ಬರಬೇಕು ಎಂದು 11 ಗಂಟೆವರೆಗೂ ಪ್ರತಿಭಟನೆ ನಡೆಸಿದರು. ನಂತರ ಹೊಸದಾಗಿ ಬಂದ ಪ್ರಾಂಶುಪಾಲರು ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಿ ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿ, ಮಕ್ಕಳಿಗೆ ತಿಂಡಿ ನೀಡಿ, ತರಗತಿಗೆ ಕಳುಹಿಸಿದರು.
ಮಕ್ಕಳ ಪಾಲಕರ ಸಭೆ: ವಸತಿ ಶಾಲೆಯಲ್ಲಿ ಘಟನೆ ಆದ ಬಳಿಕ ಮಕ್ಕಳ ಪಾಲಕರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಪಾಲಕರ ಸಭೆ ಕರೆದು ಪ್ರಾಂಶುಪಾಲರು ಚರ್ಚಿಸಿದರು. 150ಕ್ಕೂ ಹೆಚ್ಚಿನ ಪಾಲಕರು ಹಾಜರಾಗಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ ಎಂಬುದು ಪಾಲಕರ ವಾದ. ವಸತಿ ನಿಲಯದಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯ ಒದಗಿಸಬೇಕು. ಮುಂದೆ ಇದೇ ರೀತಿ ಸಮಸ್ಯೆ ಕಂಡು ಬಂದರೆ ನಾವು ಸಹಿಸುವುದಿಲ್ಲ. ಪ್ರತಿದಿನ ರಾತ್ರಿ ಒಬ್ಬ ಶಿಕ್ಷಕರು ನಿಲಯದಲ್ಲಿಯೇ ವಾಸ್ತವ್ಯ ಹೂಡಬೇಕು. ಮಕ್ಕಳ ಜವಾಬ್ದಾರಿ ಹೊರಬೇಕು ಎಂದು ಪಾಲಕರು ಆಗ್ರಹಿಸಿದರು. ಪ್ರಾಂಶುಪಾಲರು ಪಾಲಕರಿಗೆ ಧೈರ್ಯ ಹೇಳಿದರು.
ಪ್ರತಿದಿನ ಒಬ್ಬ ಶಿಕ್ಷಕರು ರಾತ್ರಿ ವೇಳೆ ಸರತಿಯಂತೆ ಇರುತ್ತಾರೆ. ಮುಂದೆ ಈ ರೀತಿಯ ಘಟನೆ ಆಗುವುದಿಲ್ಲ. ಪಾಲಕರು ಆತಂಕಪಡಬೇಡಿ. ನಿಮ್ಮ ಮಕ್ಕಳ ಭವಿಷ್ಯ ರೂಪಿಸುವುದು ನಮ್ಮಹೊಣೆ. ನುರಿತ ಅನುಭವಿ ಶಿಕ್ಷಕರಿದ್ದು, ಉತ್ತಮ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಿ ಕೊಡಲಾಗುತ್ತದೆ.
ಹನುಮಂತಯ್ಯ, ಹೆಚ್ಚುವರಿ ಪ್ರಾಂಶುಪಾಲ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಗುನ್ನೂರು