

ರಾಮನಗರ: ಕರ್ನಾಟಕದ ರೈತ ಚಳುವಳಿಗೆ ಬಹುದೊಡ್ಡ ಇತಿಹಾಸವಿದ್ದು ಅಂತಹ ಚಳುವಳಿಯನ್ನು ಉಳಿಸಿ ಬೆಳೆಸಿ ಅಪ್ಪಿಕೊಳ್ಳುವುದು ರೈತ ಸಮುದಾಯದ ಮುಖ್ಯ ಕರ್ತವ್ಯ ಎಂದು ಸರ್ವೋಚ್ಚ ನ್ಯಾಯಾಲಯದ ಹಾಗೂ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಸಂತೋಷ್ ಹೆಗಡೆ ಹೇಳಿದರು.
ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರದ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ಹೋಬಳಿ ವೃತ್ತಶಾಖೆಯನ್ನು 28 ಹಳ್ಳಿಗಳ 4 ನೂರಕ್ಕೂ ಹೆಚ್ಚು ರೈತರಿಗೆ ಸದಸ್ಯತ್ವ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೈಲಿಗೆ ಹೋಗಿ ಬಂದವರನ್ನು ರಾಜ ಮರ್ಯಾದೆ ನೀಡಿ ಸೇಬಿನ ಹಾರ ಹಾಕಿ ಕರೆಯುತ್ತಿರುವ ಹಿಂಬಾಲಕರ ಪಡೆ ಸಾಮಾಜಿಕ ಮೌಲ್ಯದ ಪತನಕ್ಕೆ ಕನ್ನಡಿಯಾಗಿದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದೆ.
ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರ ಎಂಬಂತ ಸ್ಥಿತಿ ನಿರ್ಮಾಣವಾಗಿದೆ ವೈಯಕ್ತಿಕ ಹಿತಾಸಕ್ತಿಗಳೇ ಇಂದಿನ ಪ್ರಜಾಪ್ರಭುತ್ವದಲ್ಲಿ ಮನೆ ಮಾಡಿವೆ. ಜನಪ್ರತಿನಿಧಿಯಾದವ ಸಮುದಾಯಕ್ಕಾಗಿ ಆ ಜನರ ಉಳಿವಿಗಾಗಿ ಧರ್ಮ ಜಾತಿ ಭಾಷೆ ಆಧಾರಗಳಿಂದ ಹೊರತಾಗಿ ಅಮಿಷ ಗಳನ್ನು ಹುಟ್ಟುಹಾಕದೆ ಸಂವಿಧಾನದ ಮೌಲ್ಯಗಳನ್ನು ಅನುಸರಿಸಿ ಮೊದಲನೇ ದರ್ಜೆ ರಾಜಕಾರಣ ಮಾಡಬೇಕಾಗಿದೆ.
ತೃಪ್ತಿ ಎಂಬುವುದು ಒಂದು ಮೌಲ್ಯ ರಾಜಕಾರಣಿಗಳು ತೃಪ್ತಿಯನ್ನು ಅನುಭವಿಸದೆ ಹೋದರೆ ಅವರ ಭವಿಷ್ಯಗಳೇ ನಾಶವಾಗುತ್ತವೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ರೈತ ಮುಖಂಡ ಪುಟ್ಟಸ್ವಾಮಿ ಮಾತನಾಡಿ, ಭಾರತ ಬದುಕಿರುವುದೇ ಹಳ್ಳಿಗಳ ಉಸಿರಾಟದಿಂದ ರೈತರನ್ನು ಕೀಳಾಗಿ ಕಂಡರೆ ರೈತರ ಹಿತಾಶಕ್ತಿ ಕಡೆಗಣಿಸಿದರೆ ದೇಶಕ್ಕೆ ಉಳಿಗಾಲವಿಲ್ಲ ಇನ್ನು ಇಂದು ಆರಂಭವಾಗಿರುವ ಸಂಘಟನೆ ಇಡೀ ಬೆಂಗಳೂರು ನಗರ ರಾಜ್ಯಕ್ಕೆ ಮಾದರಿಯಾಗಬಲ್ಲ ಚಳುವಳಿಯನ್ನು ರೂಪಿಸುವ ನಿಟ್ಟಿನಲ್ಲಿ ರೈತ ಸದಸ್ಯರು ಶಾಂತಿ ಶಿಸ್ತು ಬದ್ಧತೆಯಿಂದ ಮುಂದಾಗಬೇಕೆಂದು ಕರೆ ನೀಡಿ, ಸಂಘಕ್ಕೆ ಸೇರ್ಪಡೆಯಾದ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ ವೆಂಕಟೇಶ್ ಎಚ್.ಎಂ, ಸಾಮಾಜಿಕ ಕಾರ್ಯಕರ್ತ ರಮೇಶ್, ನಿವೃತ್ತ ಅಧಿಕಾರಿ ಎಚ್.ಎನ್. ರುದ್ರಪ್ಪ, ಕೃಷಿ ಉತ್ಪನ್ನ ಮಾರಾಟ ಮಹಾಮಂಡಳಿಯ ನಿವೃತ್ತ ಅಧಿಕಾರಿ ಎಂಸಿ ಸ್ವಾಮಿ, ನದೀಮ್ ಪಾಷಾ ತಿಳಿಸಿದರು, ರೈತ ಪ್ರಶಾಂತ್ ಹೊಸದುರ್ಗ ಇದ್ದರು.