

ರಾಮನಗರ: ಜಾತ್ಯಾತೀತ ಜನತಾ ದಳದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಾಳೆ ಬೆಂಗಳೂರಿನ ಜೆಪಿ ಭವನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆಯ ಮೂರನೇ ದಿನವಾದ ಭಾನುವಾರ ಹಾರೋಹಳ್ಳಿಯ ಟಿ.ಹೊಸಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ಈ ಮೊದಲು ಶುಕ್ರವಾರ ರಾಮನಗರದಲ್ಲಿ ಪಟ್ಟಿ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅದು ಧಾರ್ಮಿಕ ಕಾರ್ಯಕ್ರಮವಾದ ಕಾರಣ ಅಲ್ಲಿ, ರಾಜಕೀಯ ಬೇಡ ಎನ್ನುವ ಕಾರಣಕ್ಕೆ ಮುಂದೂಡಲಾಗಿತ್ತು. ಸೋಮವಾರ ನಮ್ಮ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಲ್ಲದೆ, ಸೋಮವಾರದಿಂದಲೇ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶ ಪ್ರಾರಂಭವಾಗುತ್ತಿದ್ದು, ನಾನು ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ನಮ್ಮ ಪಕ್ಷದ ಉಪ ನಾಯಕ ಬಂಡಪ್ಪ ಕಾಶಂಪೂರ್ ಭಾಗಿಯಾಗಲಿದ್ದಾರೆ.
ಕೆಲವೊಂದು ವಿಚಾರ ಸಂಬಂಧ ಅವರೊಟ್ಟಿಗೆ ಚರ್ಚೆ ಮಾಡಿದ್ದೇನೆ. ಸದನದಲ್ಲಿ ಆ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ. ಸತತ 11 ದಿನಗಳ ಪಂಚರತ ್ನಯಾತ್ರೆ ಪ್ರವಾಸ ಮಾಡಲಿದ್ದೇನೆ. ಹಾಗಾಗಿ ನಾನು ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಕನಕಪುರಕ್ಕೆ ಸೂಕ್ತ ಅಭ್ಯರ್ಥಿ: ಕನಕಪುರ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಆದಷ್ಟು ಬೇಗ ಸೂಕ್ತ ಅಭ್ಯರ್ಥಿ ಘೋಷಣೆ ಮಾಡಲಿದ್ದೇವೆ. ಕನಕಪುರದಲ್ಲಿ 60-70 ಸಾವಿರ ಜೆಡಿಎಸ್‌ಗೆ ಮತಗಳಿವೆ. ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದ್ರೂ ಮತಗಳು ಬರುತ್ತವೆ. ಗೆಲುವಿಗೆ ನಮಗೆ ಬೇಕಾಗಿರುವುದು 20-25 ಸಾವಿರ ಮತಗಳು ಮಾತ್ರ, ಈ ಬಾರಿ ಕನಕಪುರದಲ್ಲಿ ಜೆಡಿಎಸ್ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿಗೆ ಟಾಂಗ್: ಹಾರೋಹಳ್ಳಿ ಪಟ್ಟಣದಲ್ಲಿ ಸಭೆಯಲ್ಲಿ ಮಾತನಾಡಿದ ಎಚ್‌ಡಿಕೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರೇಳದೆ ಅವರ ವಿರುದ್ಧ ಹರಿಹಾಯ್ದರು. ಶಾಪಿಂಗ್ ಮಾಲ್, ಕಟ್ಟಡ ಕಟ್ಟೋದಕ್ಕೆ ಹಣ ಮಾಡಲಿಲ್ಲ, ನಾನು ರಾಜಕಾರಣಕ್ಕೆ ಬರೋದಕ್ಕೂ ಮುಂಚೆ ಬಿಡದಿ ಕೇತಗಾನಹಳ್ಳಿಯಲ್ಲಿ ಸಂಪಾದನೆ ಮಾಡಿದಷ್ಟೇ, ಇಲ್ಲ ಗಣಿಗಾರಿಕೆ ಮಾಡಿಲ್ಲ, ಶಾಂಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನ ಮಾಡಿಲ್ಲ. ನಾನು ಯಾವರೀತಿಯಲ್ಲಿ ಬದುಕಿದ್ದೇನೆ ನೀವೇ ನೋಡಿದ್ದೀರಿ ಎಂದು ಡಿಕೆಶಿಗೆ ಕುಟುಕಿದರು.
ನಾನು ಎಂದೂ ಅಭಿವೃದ್ಧಿಗೆ ವಿರೋಧ ಮಾಡಲಿಲ್ಲ, ಜನತೆ ಸಂಕಷ್ಟಕ್ಕೆ ನಾನಿದ್ದೇನೆ, ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವುದಿಲ್ಲ, ತೆರಿಗೆ ಹಣವನ್ನ ಬಿಜೆಪಿಯವರು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ, ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟ ಬಹುಮತ ಬೇಕು ಎಂದು ಮನವಿ ಮಾಡಿದರು.