

ರಾಮನಗರ
ನನ್ನ ಅವಧಿಯಲ್ಲಿ ಜಾನಪದ ಲೋಕವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ತೃಪ್ತಿ ಇದೆ. ಆಧಾರರಹಿತ ಆರೋಪ ಮಾಡುವುವವರಿಗೆ ಅಂಜುವ ಅಗತ್ಯವಿಲ್ಲ ಎಂದು ಕರ್ನಾಟಕ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ನಾರಾಯಣ ಅವರ ಅವಧಿಯಲ್ಲಿ ಕಾರ್ಯಾಧ್ಯಕ್ಷನಾಗಿ, ಅವರ ನಿಧನಾನಂತರ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಜಾನಪದ ಕ್ಷೇತ್ರ ಮತ್ತು ಲೋಕವನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಸುಮಾರು 16 ಕೋಟಿ ರೂ. ಅನುದಾನ ತಂದಿದ್ದೇನೆ. ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಿದ್ದೇನೆ. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ನೀಡುವುದೂ ಸೇರಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಜಾನಪದ ಲೋಕದ ಸಿಬ್ಬಂದಿಗೆ ಉತ್ತಮ ಸಂಬಳದ ಜತೆಗೆ ಇತರ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ನನ್ನ ಪ್ರಯತ್ನಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ, ಕಲಾವಿದರು, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಎಲ್ಲರ ಸಹಕಾರವಿದೆ ಎಂದರು.
ಹೆದರುವುದಿಲ್ಲ
ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಅತೃಪ್ತರು ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರಿಗೂ ಹೆದರುವುದಿಲ್ಲ. ಯಾರೇ ಆದರೂ ಆರೋಪ ಮಾಡುವ ಮುನ್ನ ಪುರಾವೆಗಳನ್ನು ನೀಡಲಿ. ನನ್ನ ಅವಧಿಯಲ್ಲಿ ಎಂದಿಗೂ ಯಾವುದೇ ವಿಷಯದಲ್ಲಿಯೂ ಭ್ರಷ್ಟಾಚಾರ ನಡೆಸಿಲ್ಲ. ಯಾವುದೇ ಕಮಿಷನ್ ಪಡೆದುಕೊಂಡಿಲ್ಲ. ಕೆಲವು ಸಂದರ್ಭದಲ್ಲಿ ಸ್ವಂತ ಹಣ ಬಳಕೆ ಮಾಡಿದ್ದೇನೆ. 2.5 ಲಕ್ಷ ರೂ.ಗಳ ದತ್ತಿಯನ್ನು ಸ್ಥಾಪಿಸಿದ್ದೇನೆ ಎಂದು ತಿಮ್ಮೇಗೌಡ ತಮ್ಮ ವಿರುದ್ಧ ಆರೋಪ ಮಾಡುವವರಿಗೆ ತಿರುಗೇಟು ನೀಡಿದರು. ಅಲ್ಲದೆ, ಅಮರನಾರಾಯಣ ಅವರ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ಧಮೆ ದಾಖಲಾಗಿದೆ ಎಂದೂ ತಿಮ್ಮೇಗೌಡ ತಿಳಿಸಿದರು.
ಶಿಫಾರಸು ಮಾಡಿಲ್ಲ
ಜಾನಪದ ಪರಿಷತ್‌ನ ಮುಂದಿನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಯಾರ ಹೆಸರನ್ನೂ ನಾನು ಶಿಫಾರಸು ಮಾಡಿಲ್ಲ, ಸಾಹಿತಿಯೋ, ಕಲಾವಿದರೋ, ಐಎಎಸ್ ಅಧಿಕಾರಿಯೋ ಯಾರೇ ಆದರೂ ಸಂತೋಷ ಎಂದರು. ವಿಠಲಮೂರ್ತಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರಿಂದ ಅವರ ಹೆಸರನ್ನು ಆಡಳಿತ ಮಂಡಳಿ ಸಭೆಯಲ್ಲಿ ಕೆಲವರು ಸೂಚಿಸಿದರು. ಇದಕ್ಕೆ ಹಿ.ಶಿ.ರಾಮಚಂದ್ರೇಗೌಡ ಮತ್ತು ಜಯಪ್ರಕಾಶ್‌ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಆಡಳಿತ ಮಂಡಳಿ ನಿರ್ಧಾರವನ್ನೇ ವಿಠಲಮೂರ್ತಿ ಅವರು ನಿರಾಕರಿಸಿದ್ದಾರೆ. ಮುಂದಿನ ಅಧ್ಯಕ್ಷರು ಯಾರಾಗಬೇಕು ಎನ್ನುವುದನ್ನು ಆಡಳಿತ ಮಂಡಳಿ ನಿರ್ಣಯಿಸಲಿದೆ. ಇದಕ್ಕಾಗಿ ಇದೇ ಆ.17ರಂದು ಸಭೆ ನಡೆಯಲಿದೆ ಎಂದರು.
ನಾನು ಕಾರಣ ಅಲ್ಲ
ಜಾನಪದ ಲೋಕದಲ್ಲಿ ಕೆಲವು ಮಹಿಳಾ ಸಿಬ್ಬಂದಿ ಕೆಲಸ ಕಳೆದುಕೊಳ್ಳಲು ನಾನು ಕಾರಣ ಅಲ್ಲ, ಹಿಂದೆ ಇದ್ದ ಆಡಳಿತಾಧಿಕಾರಿ ಹಾಗೂ ಕೆಲವು ಸಿಬ್ಬಂದಿ ನಡುವೆ ಲೋಕದ ಕೆಲಸ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪತ್ರ ವ್ಯವಹಾರವೂ ನಡೆದಿದೆ ಎಂದು ತಿಮ್ಮೇಗೌಡ ತಿಳಿಸಿದರು.
ಜಾನಪದ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಕೆಲಸ ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ಇದೆ. ಆಧಾರರಹಿತ ಆರೋಪ ಮಾಡುವವರಿಗೆ ಹೆದರುವುದಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ.
ಟಿ.ತಿಮ್ಮೇಗೌಡ, ಮಾಜಿ ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್