

ರಾಮನಗರ
ಭ್ರೂಣ ಪರೀಕ್ಷೆಯ ಮೂಲ ಉದ್ದೇಶ ಆ ಮಗು ಯಾವುದೇ ರೋಗ, ನ್ಯೂನ್ಯತೆ, ವಿಕೃತಿ ಇಲ್ಲದೆ ಜನಿಸಲು ಸಹಾಯ ಮಾಡುವಂಥದ್ದಾಗಿದೆ. ಈ ಪರೀಕ್ಷೆ ಮಾಡುವಾಗ ಭ್ರೂಣದ ಲಿಂಗ ಯಾವುದೆಂದು ತಿಳಿಸಬಾರದು. ಲಿಂಗ ಪತ್ತೆ ಮಾಡಿಸಿಕೊಂಡವರು, ಪತ್ತೆ ಮಾಡಿಸುವ ವೈದ್ಯರು, ಪತ್ತೆ ಮಾಡಿಸುವಂತೆ ಒತ್ತಾಯಿಸುವ ಅಥವಾ ಪ್ರೇರೇಪಿಸುವವರು ಸೇರಿ ಎಲ್ಲರೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಆಯೋಜಿಸಲಾಗಿದ್ದ ಪಿಸಿ-ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗರ್ಭಿಣಿ, ಗರ್ಭಪೂರ್ವ ಮತ್ತು ಪ್ರಸವಪೂರ್ವ ಸಮಯದಲ್ಲಿ ಭ್ರೂಣ ಪತ್ತೆ ಕಾರ್ಯವನ್ನು ನಿಷೇಧಿಸಲಾಗಿದೆ. ಭ್ರೂಣ ಪತ್ತೆ ಕಾನೂನಾತ್ಮಕವಾಗಿ ಶಿಕ್ಷಾರ್ಹ ಹಾಗೂ ದಂಡಾರ್ಹ. ಭ್ರೂಣ ಪತ್ತೆ ನಿಷೇಧ ಕುರಿತು ಸಾಮಾಜಿಕ ಅರಿವು ಮೂಡಿಸುವಂತೆ ತಿಳಿಸಿದರು.
ಶಿಕ್ಷಾರ್ಹ, ದಂಡಾರ್ಹ
ಈ ಕಾಯ್ದೆಯಡಿಯಲ್ಲಿ ವೈದ್ಯಾಧಿಕಾರಿಗಳು ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಲ್ಲಿ ಅವರಿಗೆ 3 ವರ್ಷಗಳವರೆಗೆ ವಿಸ್ತರಿಸಲ್ಪಡುವ ಅವಧಿಯ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಅಪರಾಧ ಪುನಾರವರ್ತನೆಯಾದಲ್ಲಿ 5 ವರ್ಷಗಳವರೆಗೆ ವಿಸ್ತರಿಸಲ್ಪಡುವ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದರು. ಯಾರಾದರೂ ಸಲಹಾ ಕೇಂದ್ರ ಪ್ರಯೋಗಶಾಲೆ ಅಥವಾ ಇನ್ನಾವುದೇ ಅಥವಾ ವೈದ್ಯಕೀಯ ಉದ್ಯೋಗಿಯ ಸಹಾಯ ಕೋರಿ, ಗರ್ಭಿಣಿಯ ಮೇಲೆ ಲಿಂಗ ಪತ್ತೆ ಪ್ರಯೋಗ ನಡೆಸಿದಲ್ಲಿ. ಅಂತಹ ವ್ಯಕ್ತಿಗೆ ಜೈಲುಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಾಂತರಾಜು, ಪಿಸಿ ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.