

ರಾಮನಗರ
ಇತ್ತೀಚಿನ ದಿನಗಳಲ್ಲಿ ಮಾನವ ಸಂಪನ್ಮೂಲದ ದುರ್ಬಳಕೆ ಮಕ್ಕಳಿಂದಲೇ ಶುರುವಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಪಿ. ಅನಿತಾ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ನಾತಕೋತ್ತರ ವಿಶ್ವವಿದ್ಯಾಲಯ ಡಾನ್‌ಬಾಸ್ಕೋ ಹಾಗೂ ಜಿಲ್ಲೆಯ ಎಲ್ಲ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಉದ್ಘಾಟಿಸಿ ವಾತನಾಡಿದರು.
ಬಾಲ ಕಾರ್ಮಿಕರನ್ನಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು, ಮಹಿಳೆಯರ ಅಸಹಾಯಕತೆಯನ್ನು ಬಳಸಿಕೊಂಡು ಅವರನ್ನು ಜೀತ ಪದ್ದತಿಗೆ ಅಥವಾ ಅವರಿಗೆ ಕಡಿಮೆ ಸಂಬಳಕ್ಕೆ ದುಡಿಸಿಕೊಕೊಳ್ಳುತ್ತಿರುವುದು ದುಃಖಕರ ಎಂದರು.
ಮಾನವ ಕಳ್ಳ ಸಾಗಾಣಿಕೆ ತಡೆ ಕೇವಲ ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ಇದಕ್ಕೆ ಎಲ್ಲ ಇಲಾಖೆಗಳು ಕೈಜೋಡಿಸಬೇಕು ಹಾಗೂ ಸಾರ್ವಜನಿಕರು ಸಹ ಭಾಗಿಯಾಗಬೇಕು. ವಿದ್ಯಾರ್ಥಿಗಳ ದೆಸೆಯಿಂದಲೇ ಅರಿವು ಮೂಡಿಸುವ ಕೆಲಸವಾಗಬೇಕು. ಎಲ್ಲೆಲ್ಲಿ ಇಂತಹ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆಯೋ ಅದನ್ನು ಎಲ್ಲ ಇಲಾಖೆಗಳು ಎಚ್ಚರಿಕೆಯಿಂದ ಪರಿಗಣಿಸಿ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮಾನವ ಕಳ್ಳ ಸಾಗಾಣಿಕೆಯನ್ನು ತೊಲಗಿಸಬೇಕು ಎಂದರು.
ವಿದ್ಯಾಭ್ಯಾಸ ಕೊರತೆ ಕಾರಣ
ಈ ಪದ್ಧತಿ ವಿದ್ಯಾಭ್ಯಾಸ ಕೊರತೆಯಿಂದ, ಬಡತನ ಹಾಗೂ ಸಾವಾಜಿಕ ಮೂಢನಂಬಿಕೆಗಳಿಂದ ಶುರುವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ನೊಂದವರಿಗೆ ಧೈರ್ಯತುಂಬಿ ಈ ಪದ್ದತಿಯನ್ನು ಹೋಗಲಾಡಿಸಲು ಕೈಜೋಡಿಸಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ ಶಿಕ್ಷಣದಿಂದ ವಂಚಿತರಾದವರ ಕುರಿತು ವಾಹಿತಿ ಕಲೆಹಾಕಿ ಶಿಕ್ಷಣ ಇಲಾಖೆ ನೀಡಿ ಶಿಕ್ಷಣ ಒದಗಿಸಲು ಸಹಕರಿಸುವಂತೆ ಅನಿತಾ ತಿಳಿಸಿದರು. ಮಾನವ ಕಳ್ಳ ಸಾಗಾಣಿಕೆಗೆ ಒಳಗಾದವರಿಗೆ ಪುನರ್ವಸತಿ ಕಲ್ಪಿಸಿ, ಅವರ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಾಮಾಜಿಕ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕುರಿತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಮನ್ವಯತೆ ಕಾಪಾಡಿಕೊಂಡು ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ. ಸಮುದಾಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು, ಕಾನೂನುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಲ್ಲ ಇಲಾಖೆಗಳು ಮಾನವ ಕಳ್ಳ ಸಾಗಾಣಿಕೆ ಪದ್ಧತಿ ಹೋಗಲಾಡಿಸಲು ಕೈಜೋಡಿಸುವಂತೆ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಎಲ್. ಸುರೇಂದ್ರ ವಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಷಣ್ಮುಗಂ ಸುಂದರಂ, ಬೆಂಗಳೂರು ವಿವಿ ಸವಾಜಕಾರ್ಯ ವಿಭಾಗದ ಉಪನ್ಯಾಸಕ ಮಧು, ಡಾನ್‌ಬಾಸ್ಕೋ ಜಿಲ್ಲಾ ಸಂಯೋಜಕ ಫಾದರ್ ಸಜ್ಜಿ, ಬಾಸ್ಕೋ ಸಂಸ್ಥೆಯ ರಾಮಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್‌ಜಿಒಗಳು, ಆಶಾ, ಅಂಗನವಾಡಿ ಕಾರ್ಯರ್ತೆಯರು ಮತ್ತಿತರರು ಉಪಸ್ಥಿತರಿದ್ದರು.