

ಗಂಗಾಧರ್ ಬೈರಾಪಟ್ಟಣ ರಾಮನಗರ
ಚಂಡಮಾರುತದ ಹೊಡೆತಕ್ಕೆ ದಕ್ಷಿಣ ರಾಜ್ಯಗಳು ತತ್ತರಿಸಿವೆ. ಚಳಿಯ ಅಬ್ಬರಕ್ಕೆ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಂತಹ ಚಳಿಯಲ್ಲಿಯೂ ಜಿಲ್ಲೆಯ ಕೆಲವು ವಸತಿ ಶಾಲೆಗಳಲ್ಲಿ ಹಾಸಿಗೆ ಕೊರತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಚಾಪೆಯ ಮೇಲೆ ಮಲಗುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಹುತೇಕ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ರೋಗಿಗಳಿಗೆ ಹಾಸ್ಟೆಲ್‌ನಲ್ಲಿಯೇ ಇದ್ದ ಹಾಸಿಗೆಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ನಂತರ ಇವುಗಳನ್ನು ಸ್ಯಾನಿಟೈಜ್ ಮಾಡಿ ಮರುಬಳಕೆಗೆ ನೀಡಲಾಗಿದೆಯಾದರೂ, ಇವು ಬಳಕೆಗೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮಕ್ಕಳು ಚಾಪೆಯ ಮೇಲೆಯೇ ಮಲಗುತ್ತಿದ್ದಾರೆ.
ಪಾಲಕರ ಆಕ್ರೋಶ
ಪ್ರತಿ ಹಾಸ್ಟೆಲ್‌ನಲ್ಲಿ ಪಾಲಕರ ಸಭೆ ನಡೆಸಲಾಗುತ್ತದೆ. ಈ ವೇಳೆ ಹಾಸ್ಟೆಲ್‌ನಲ್ಲಿ ಹಾಸಿಗೆ ಕೊರತೆ ಇರುವುದು ಕಂಡುಬಂದಿದ್ದು, ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ಪಾಲಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಕೂಡಲೇ ಮಕ್ಕಳಿಗೆ ಹಾಸಿಗೆ ಒದಗಿಸುವಂತೆ ಆಗ್ರಹಿಸಿದ್ದಾರೆ. ಆದರೆ ಪಾಲಕರ ಆಕ್ರೋಶಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ, ಚಳಿ ಹೆಚ್ಚಾಗುತ್ತಿದ್ದರೂ ಮಕ್ಕಳಿಗೆ ಹಾಸಿಗೆ ಒದಗಿಸುವ ಕೆಲಸ ಆಗಿಲ್ಲ.
ಕೊರತೆ ಇದೆ
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಗೆ ಒಳಪಡುವ ಸಾಕಷ್ಟು ಹಾಸ್ಟೆಲ್‌ಗಳನ್ನು ಕೋವಿಡ್ ಕೇಂದ್ರಗಳಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಹಾಸ್ಟೆಲ್‌ನಲ್ಲಿಯೇ ಇದ್ದ ಹಾಸಿಗೆಗಳನ್ನು ಬಳಕೆ ಮಾಡಿಕೊಳ್ಳುವ ಜೊತೆಗೆ ಕೋವಿಡ್ ಕೇಂದ್ರದ ಹತ್ತಿರದ ಹಾಸ್ಟೆಲ್‌ಗಳಲ್ಲಿ ಇದ್ದ ಹಾಸಿಗೆಗಳನ್ನೂ ಬಳಕೆ ಮಾಡಿಕೊಳ್ಳಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಕೆಲವು ಹಾಸಿಗೆಗಳನ್ನು ನಾಶಪಡಿಸಿದರೆ ಮತ್ತೆ ಕೆಲವನ್ನು ಸ್ಯಾನಿಟೈಸ್ ಮಾಡಿ ಹಾಸ್ಟೆಲ್‌ಗಳಲ್ಲಿಯೇ ಇಡಲಾಗಿದೆ. ಆದರೆ ವಿಪರ್ಯಾಸ ಎಂದರೆ ಕೋವಿಡ್ ಕೇಂದ್ರವಲ್ಲದ ಹಾಸ್ಟೆಲ್‌ಗಳಿಂದ ಪಡೆದುಕೊಂಡಿದ್ದ ಹಾಸಿಗೆಗಳನ್ನು ವಾಪಸ್ ಮಾಡಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಹಾಸಿಗೆ ಇಲ್ಲದೆ ಚಾಪೆಯ ಮೇಲೆ ಮಲಗುವಂತೆ ಆಗಿದೆ.
ಬದಲಿಸಬೇಕಿದೆ
ಇಲಾಖೆ ನೀಡುವ ಮಾಹಿತಿಯಂತೆ ಹಾಸಿಗೆ ಕೊರತೆ ಇದೆ. ಇದರ ಜತೆಗೆ ಪ್ರತಿ ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಿರುವ ಕಾರಣದಿಂದಾಗಿ ಹಾಸಿಗೆ ಕೊರತೆ ಉಂಟಾಗಿದೆ. ಅಲ್ಲದೆ, ಪ್ರತಿ ಮೂರ‌್ನಾಲ್ಕು ವರ್ಷಗಳಿಗೊಮ್ಮೆ ಹೊಸ ಹಾಸಿಗೆ ಕೊಡಬೇಕಿದೆ. ಆದರೆ ಈ ಕೆಲಸ ಆಗಿಲ್ಲ. ಕ್ರೈಸ್ ಸಂಸ್ಥೆ ತನ್ನ ವ್ಯಾಪ್ತಿಗೆ ಒಳಪಡುವ ಹಾಸ್ಟೆಲ್‌ಗಳಿಗೆ ಹೊಸ ಹಾಸಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಮಾಹಿತಿ ನೀಡಿದರು.
ಕೂಡಲೇ ಗಮನಹರಿಸಿ
ಜಿಲ್ಲೆಯಲ್ಲಿ ಉಂಟಾಗಿರುವ ಹಾಸಿಗೆ ಸಮಸ್ಯೆಗೆ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಸ್ಪಂದಿಸಬೇಕಿದೆ. ಇದು ಜಿಲ್ಲೆಯ ಕಥೆ ಮಾತ್ರವಲ್ಲ. ಮತ್ತಷ್ಟು ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ. ಏನೇ ಆದರೂ ಚಳಿಗಾಲ ಕಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಕೂಡಲೇ ಗಮನಹರಿಸಿ ಕೊರತೆ ಇರುವ ಕಡೆಗೆ ಹಾಸಿಗೆಗಳನ್ನು ಪೂರೈಕೆ ಮಾಡಬೇಕಿದೆ. ಇಲ್ಲವಾದರೆ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.
ಚಳಿಯಲ್ಲಿ ಸಾಮಾನ್ಯವಾಗಿ ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳು ಚಾಪೆಯ ಮೇಲೆ ಮಲಗುವಂತಾಗಿದೆ. ಕೋವಿಡ್ ನಂತರ ಹಾಸ್ಟೆಲ್‌ಗಳ ಹಾಸಿಗೆಗಳನ್ನೂ ಕೊಟ್ಟಿಲ್ಲ. ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಮಕ್ಕಳಿಗೆ ಹಾಸಿಗೆ ಒದಗಿಸಬೇಕು.
ಗಾಣಕಲ್ ನಟರಾಜ್, ತಾಪಂ ಮಾಜಿ ಅಧ್ಯಕ್ಷ, ರಾಮನಗರ
ಕೋವಿಡ್ ಸಂದರ್ಭದಲ್ಲಿ ಹಾಸಿಗೆಗಳನ್ನು ಬಳಕೆ ಮಾಡಿಕೊಂಡು, ನಂತರ ವಾಪಸ್ ನೀಡಲಾಗಿದೆ. ಇದರ ಹೊರತಾಗಿಯೂ ಕೆಲವು ಕಡೆಗಳಲ್ಲಿ ಹಾಸಿಗೆಗಳ ಕೊರತೆ ಇದ್ದು, ಇಲಾಖೆ ಗಮನಕ್ಕೆ ತಂದು ಕೂಡಲೇ ಸರಿಪಡಿಸುವ ಕೆಲಸ ಮಾಡಲಾಗುವುದು.
ಯೋಗೇಶ್, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ರಾಮನಗರ