ಉತ್ಕೃಷ್ಟ ಆರೋಗ್ಯದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಚಿವ ಕೆ.ಸುಧಾಕರ್

02-03-rama-Hospital 2
Published on

ರಾಮನಗರ: ನಗರದಲ್ಲಿ ನೂತನವಾಗಿ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ನಿರ್ಮಾವಾಗಿರುವ 375 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.

ಆಸ್ಪತ್ರೆ ಉದ್ಘಾಟನೆ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕೋವಿಡ್ ನಂತರ ರಾಜ್ಯ ಸರ್ಕಾರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ನೂತನ ಅಸ್ಪತ್ರೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮತ್ತು ವೈದ್ಯರನ್ನು ತ್ವರಿತವಾಗಿ ನೇಮಕ ಮಾಡಲಾಗುವುದು.  2017 ರಲ್ಲಿ 67 ಕೋಟಿ ವೆಚ್ಚದಲ್ಲಿ ಪ್ರಾರಂಭಗೊAಡ ಆಸ್ಪತ್ರೆ ಹಣದ ಸಮಸ್ಯೆಯಿಂದ 2020 ರಲ್ಲಿ ಸ್ಥಗಿತಗೊಂಡಿತು. ನಂತರ ಬಿಜೆಪಿ ಸರ್ಕಾರ ಹೆಚ್ಚುವರಿ ಹಣ ಬಿಡುಗಡೆ ಮಾಡುವ ಮೂಲಕ ಇಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ ಎಂದು ಹೇಳಿದರು.

ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಯಾದಗಿರಿಯಲ್ಲಿ ನೂತನ ವೈದ್ಯಕೀಯ ಕಾಲೇಜುಗಳನ್ನು ಮಾ. 17 ರಂದು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಲಿದ್ದು, 600 ಕೋಟಿ ವೆಚ್ಚದ ಆರೋಗ್ಯ ವಿವಿಗೆ ಮಾ.20 ರೊಳಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈಗಾಗಲೇ 300 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ಜಿಲ್ಲಾ ಕೇಂದ್ರದಲ್ಲಿರುವ ಹಳೆ ಆಸ್ಪತ್ರೆಯನ್ನು 100 ಹಾಸಿಗೆಗಳ ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಜನರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ನಡೆದುಕೊಳ್ಳುವ ಮೂಲಕ ಜನಸ್ನೇಹಿಯಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಆಶ್ವತ್ಥನಾರಾಯಣ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ವಹಿಸಿದೆ. ಮಣಿಪಾಲ್ ಆಸ್ಪತ್ರೆ ಸಿಬ್ಬಂದಿ ಕರೆತಂದು ವಿಶೇಷ ಆಸಕ್ತಿ ವಹಿಸಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

ಬೆಂಗಳೂರಿಗೆ ರಾಮನಗರ ಜಿಲ್ಲೆಯನ್ನು ಹೆಬ್ಬಾಗಿಲಾಗಿ ಪರಿವರ್ತಿಸುವ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿನ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಈ ಆಸ್ಪತ್ರೆಯನ್ನು 500 ಹಾಸಿಗೆಗಳಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿದೆ ಎಂದರು.

ರಾಜೀವಗಾಂಧಿ ವಿವಿ 270 ಎಕರೆ ಜಾಗದಲ್ಲಿ ನಿರ್ಮಾಣ ಆಗಲಿದ್ದು, ಈಗಾಗಲೆ ಟೆಂಡರ್ ಪೂರ್ಣಗೊಂಡಿದ್ದು, 300 ಕೋಟಿ ಬಿಡುಗಡೆ ಮಾಡಲಾಗಿದೆ. ಇಲ್ಲಿ 750 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣ ಆಗಲಿದೆ ಎಂದು ಹೇಳಿದರು. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಇಲ್ಲಿನ ಆಸ್ಪತ್ರೆಯಲ್ಲಿ ದೊರೆಯಲಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net