ಆರೋಗ್ಯ ವಿವಿಗೆ ಮತ್ತೆ ಶಂಕುಸ್ಥಾಪನೆ ಭಾಗ್ಯ ಶೀಘ್ರವೇ ಮುಖ್ಯಮಂತ್ರಿಗಳಿಂದ ಭೂಮಿಪೂಜೆ

31-12-rama-VV-munnota
Published on


ಗಂಗಾಧರ್ ಬೈರಾಪಟ್ಟಣ ರಾಮನಗರ
ಹಲವಾರು ವರ್ಷಗಳಿಂದಲೂ ನನೆಗುದಿಗೆ ಬಿದಿದ್ದ ರಾಮನಗರದ ಅರ್ಚಕರಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಿರುವ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಮತ್ತೊಮ್ಮೆ ಶಂಕುಸ್ಥಾಪನೆ ಭಾಗ್ಯ ಒದಗಿ ಬಂದಿದೆ.

ಜಮೀನು ಕಳೆದಕೊಂಡ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣದಿಂದಾಗಿ ಹದಿನೇಳು ವರ್ಷಗಳಿಂದ ವಿಳಂಬವಾಗಿದ್ದ ಯೋಜನೆಗೆ 300 ಕೋಟಿ ರೂ, ಅನುದಾನವನ್ನು ಗುತ್ತಿಗೆದಾರರಿಗೆ ಕೊಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಲು ಸರ್ಕಾರ ಮುಂದಾಗಿದ್ದು, ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.

ಏರಿಕೆ ಕಂಡ ವೆಚ್ಚ
ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದ ಯೋಜನೆ ಇದಾಗಿದ್ದು, 270 ಎಕರೆ ಜಮೀನಿನಲ್ಲಿ, ಆಡಳಿತ ಭವನ, ವೈದ್ಯಕೀಯ, ದಂತ, ನಸಿರ್ಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ, 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳು, ವಸತಿ ಗೃಹಗಳು ಸೇರಿ ಒಟ್ಟು 16 ಬಹತ್ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಈ ಕ್ಯಾಂಪಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಂದಿಗೆ ಇದರ ಒಟ್ಟು ಯೋಜನಾ ವೆಚ್ಚ 330 ಕೋಟಿ ರೂ.ಗಳಾಗಿತ್ತು. ಆದರೆ, ಭೂ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದ್ದ ಕಾರಣ ಯೋಜನೆ ಇಲ್ಲಿಯವರೆಗೆ ಬಂದು ನಿಂತಿದೆ. ಈ ಯೋಜನೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಎನ್. ಬಚ್ಚೇಗೌಡರಿಂದ ಆರಂಭಗೊಂಡು ಮೂರು ಬಾರಿ ಶಂಕುಸ್ಥಾಪನೆ ಮಾಡಲಾಗಿತ್ತಾದರೂ ಒಂದೇ ಒಂದು ಇಟ್ಟಿಗೆಯನ್ನು ಇಟ್ಟಿರಲಿಲ್ಲ. ಇದರಿಂದಾಗಿ ಈಗ ಇದರ ವೆಚ್ಚ 600 ಕೋಟಿ ರೂ.ಗೆ ಬಂದು ನಿಂತಿದೆ.

ಕ್ರೆಡಿಟ್ ವಾರ್ ಸಾಧ್ಯತೆ?
ಈ ಯೋಜನೆಗೆ ಬಹುತೇಕ ಎಲ್ಲ ಸರ್ಕಾರಗಳೂ ಕೈಲಾದ ಪ್ರಯತ್ನ ಮಾಡಿವೆ. ಆದರೆ ಈಗ ಮತ್ತೆ ಶಂಕುಸ್ಥಾಪನೆಗೆ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಇದರ ಕ್ರೆಡಿಟ್ ತೆಗೆದುಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗುವುದು ಬಹುತೇಕ ನಿಶ್ಚಿತ. ಪ್ರಸ್ತುತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಪ್ರಯತ್ನದ ಫಲವಾಗಿ ಬಹುತೇಕ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಕಾರ್ಯಕ್ರಮ ನಡೆಯುವ ದಿನದಂದು ಏನೆಲ್ಲಾ ನಡೆಯುವುದೋ ಕಾದು ನೋಡಬೇಕಿದೆ.

ಫಲಾನುಭವಿಗಳ ಸಮಾವೇಶ
ಮುಖ್ಯಮಂತ್ರಿ ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸಿ ಆರೋಗ್ಯ ವಿವಿ ಸ್ಥಾಪನೆ, ಬೈರಾಪಟ್ಟಣ ಮಾವು ಸಂಸ್ಕರಣಾ ಘಟಕ, ವಂದಾರಗುಪ್ಪೆ ಸಮೀಪ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ, ಜಲಜೀವನ್ ಮಿಷನ್ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ. ಆದರೆ ಜತೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಪಡೆದುಕೊಂಡ ಫಲಾನುಭವಿಗಳೊಂದಿಗೆ ಚರ್ಚಿಸುವ ಸಭೆಯನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಮನಗರಕ್ಕೆ ಬಂಪರ್
ನೂತನ ದಶಪಥದ ಹೆದ್ದಾರಿ ನಿರ್ಮಾಣದಿಂದಾಗಿ ಬಿಡದಿ, ರಾಮನಗರ, ಚನ್ನಪಟ್ಟಣದ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಯಿಂದಾಗಿ ಈ ಭಾಗದ ವ್ಯಾಪಾರ ವಹಿವಾಟು ಹೆಚ್ಚಳವಾಗುವ ಜತೆಗೆ, ಆರ್ಥಿಕತೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಇಷ್ಟೇ ಅಲ್ಲದೆ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಲ್ಲಿಯೂ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net