ಚನ್ನಪಟ್ಟಣದ ಎಚ್​ಡಿಕೆ - ಸಿಪಿವೈ ನಡುವೆ ಗುದ್ದಲಿ ಪೂಜೆ ವಾರ್ ​

IMG-20221001-WA0016 (1)
Published on

ಅಭಿಲಾಷ್ ತಿಟ್ಟಮಾರನಹಳ್ಳಿ

 ಚನ್ನಪಟ್ಟಣ

ಬೊಂಬೆಗಳ ನಾಡು ಚನ್ನಪಟ್ಟಣದಲ್ಲಿ ಚುನಾವಣಾ ಪೂರ್ವ ರಾಜಕೀಯ ಚಟುವಟಿಕೆಗಳು ರಂಗೇರಿರುವುದು ಹೊಸತೇನಲ್ಲ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕ ಯೋಗೇಶ್ವರ್ ನಡುವಿನ ರಾಜಕೀಯ ಜಂಗಿಕುಸ್ತಿ ಹಲವು ದಿನಗಳ ಹಿಂದೆಯೇ ಕ್ಷೇತ್ರದಲ್ಲಿ ಆರಂಭಗೊಂಡಿದೆ. ಈ ಮಧ್ಯೆ ಕ್ಷೇತ್ರದಲ್ಲಿ ಗುದ್ದಲಿಪೂಜೆ ಎಂಬ ಹೊಸ ವಾರ್ ರಾಜಕೀಯವನ್ನು ಮತ್ತೊಂದು ಆಯಾಮಕ್ಕೆ ತೆಗೆದುಕೊಂಡು ಹೋಗಿದೆ.

ಹೌದು, ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಮಾಡಿರುವ ೫೦ ಕೋಟಿ ವಿಶೇಷ ಅನುದಾನದ ಲಾಭಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಕಾದಾಟಕ್ಕೆ ಇಳಿದಿವೆ.

ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮನವಿ ಮೇರೆಗೆ ರಾಜ್ಯ ಸರ್ಕಾರ ಕ್ಷೇತ್ರಕ್ಕೆ ೫೦ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ೧೨೧ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಕೆಆರ್‌ಡಿಸಿಎಲ್ ಮೂಲಕ ಯೋಜನೆಯನ್ನು ಸಹ ರೂಪಿಸಲಾಗಿದೆ. ಈ ಕಾಮಗಾರಿಗಳ ಚಾಲನೆಗೆ ಇಂದು (ಶನಿವಾರ) ಗುದ್ದಲಿಪೂಜೆ ಹಮ್ಮಿಕೊಳ್ಳಲಾಗಿದೆ. ಇದೀಗ, ಈ ಗುದ್ದಲಿಪೂಜೆ ಸಂಘರ್ಷದ ಕಿಡಿ ಹೊತ್ತಿಸಿದೆ. ಶನಿವಾರ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಗುದ್ದಲಿಪೂಜೆಗೆ ಅಡ್ಡಿಪಡಿಸಲು ಜೆಡಿಎಸ್ ಪಾಳೇಯ ಸನ್ನದ್ಧವಾಗಿದೆ.

ಸದನದಲ್ಲೂ ಪ್ರಸ್ತಾಪ:

ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಗಟ್ಟಿಕೊಳ್ಳಿಸಿಕೊಳ್ಳಬೇಕು ಎಂಬುದು ಕುಮಾರಸ್ವಾಮಿ ಆಶಯವಾಗಿದ್ದರೆ, ಏನಾದರೂ ಮಾಡಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯಬೇಕು ಎಂಬುದು ಸಿ.ಪಿ.ಯೋಗೇಶ್ವರ್‌ ಶತ ಪ್ರಯತ್ನ ಮಾಡುತ್ತಿ್ದ್ದಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಬಿಜೆಪಿ ಸರ್ಕಾರದಲ್ಲೂ ಅನುದಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಮಧ್ಯೆ ಸಿ.ಪಿವೈ ಸಹ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ವಿಧಾನ ಪರಿಷತ್ ಸದಸ್ಯರೊಬ್ಬರು ಈ ಮಟ್ಟಿನ ಅನುದಾನ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು. ಈ ವಿಷಯವನ್ನು ಜೆಡಿಎಸ್ ಶಾಸಕರು ಸಧನದಲ್ಲಿ ಪ್ರಸ್ತಾಪಿಸಿ ಕ್ಷೇತ್ರದ ಚುನಾಯಿತ ಪ್ರತಿನಿಧಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಧನದಲ್ಲಿ ಪ್ರತಿಕ್ರಿಯಿಸಿದ ಸರ್ಕಾರ, ಚನ್ನಪಟ್ಟಣದಲ್ಲಿ ಸ್ಥಳೀಯ ಶಾಸಕರ ಅನುಮತಿ ಪಡೆದು ಕಾಮಗಾರಿಗೆ ಅನುಮೋದನೆ ನೀಡಲಾಗುವುದು ಎಂದು ಸಧನಕ್ಕೆ ಉತ್ತರ ನೀಡಿತ್ತು.

ಪೂಜೆಗೆ ವಿರೋಧ: ಶನಿವಾರ ತಾಲೂಕಿನ 5 ಗ್ರಾಪಂ ಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷಾನುದಾನದಡಿ ಕೈಗೊಂಡಿರುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಕಾಮಗಾರಿಗೆ ಚಾಲನೆ ನೀಡಲಿದ್ದು, ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಎಂಎಲ್‌ಸಿ ಯೋಗೇಶ್ವರ್ ಸೇರಿದಂತೆ ಶಿಷ್ಟಾಚಾರದ ಪಟ್ಟಿಯಲ್ಲಿರುವ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಿಗಮ ಮಂಡಳಿ ಅಧ್ಯಕ್ಷರುಗಳು ಹಾಗೂ ಅಧಿಕಾರಿಗಳ ಹೆಸರನ್ನು ಮುದ್ರಿಸಿ ಆಹ್ವಾನ ಪತ್ರಿಕೆಯನ್ನು ಹಂಚಲಾಗಿದೆ. ಈ ಆಹ್ವಾನ ಪತ್ರಿಕೆ ಹೊರ ಬೀಳುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ. ತಾಲೂಕಿನ ರಾಂಪುರ ಗ್ರಾಮದಲ್ಲಿ ವಿರೋಧ ವ್ಯಕ್ತಪಡಸಿಲು ಸಜ್ಜಾಗುವಂತೆ ತನ್ನ ಕಾರ್ಯಕರ್ತರಿಗೆ ಸ್ವತಃ ತಾಲೂಕು ಜೆಡಿಎಸ್​ ಅಧ್ಯಕ್ಷ ಎಚ್​.ಸಿ.ಜಯಮುತ್ತು ಅವರೇ ಕರೆ ನೀಡಿದ್ದಾರೆ.

ರಾಜಕೀಯ ಕದನದ ಬಗ್ಗೆ ಕುತೂಹಲ:

ಇಷ್ಟು ದಿನ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ಕೇವಲ ಹೇಳಿಕೆ ಪ್ರತಿಹೇಳಿಕೆಗಳಲ್ಲಿತ್ತು. ಈಗ ಗುದ್ದಲಿಪೂಜೆ ವಾರ್ ಈ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಗುದ್ದಲಿಪೂಜೆ ವಿಚಾರದಲ್ಲಿ ಎರಡು ಪಾಳೇಯ ಕಾದಾಟಕ್ಕೆ ಇಳಿದಿದ್ದು, ಇಂದಿನ (ಶನಿವಾರ) ಕದನದ ಬಗ್ಗೆ ಕುತೂಹಲ ಮೂಡಿದೆ.

ರಾಂಪುರದಲ್ಲಿ ಬಿಗಿ ಭದ್ರತೆ: ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಜೆಡಿಎಸ್​ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿರುವ ಬೆನ್ನಲ್ಲೇ ರಾಂಪುರ ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಬಿಜೆಪಿ ಸಹ ಜೆಡಿಎಸ್​ ಕಾರ್ಯಕರ್ತರ ವಿರೋಧಕ್ಕೆ ಪ್ರತಿರೋದ ಒಡ್ಡಲು ಸಿದ್ದತೆಯನ್ನು ಮಾಡಿಕೊಂಡಿರುವುದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜಿಲ್ಲಾ ಪೊಲೀಸ್​ ಹೆಚ್ಚಿನ ಬಂದೋಬಸ್ತ್​ ಕೈಗೊಂಡಿದ್ದು, ಮುಂದೇನಾಗುವುದು ಎನ್ನುವ ಆತಂಕವೂ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net