

ರಾಮನಗರ: ಸಂಸದ ಡಿ.ಕೆ.ಸುರೇಶ್ ರಾಜಕಾರಣದ ವೈರಾಗ್ಯದ ಮಾತುಗಳನ್ನು ಆಡುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನನ್ನ ರಾಜಕಾರಣ ಕಾರ್ಯಕರ್ತರ ಒತ್ತಾಯಕ್ಕೆ ಮಾತ್ರ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ರಾಷ್ಟ್ರ ರಾಜಕಾರಣಕ್ಕೆ ಹೋಗುವವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನಗೆ ರಾಜಕಾರಣದ ಮೇಲೆ ಒಲವಿಲ್ಲ, ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ, ರಾಜಕಾರಣದಲ್ಲಿದ್ದೇನೆ ಎಂದು ಹೇಳಿದರು.
ಮತ್ತೊಂದೆಡೆ ಡಿ.ಕೆ.ಸುರೇಶ್ ರಾಜಕೀಯ ವೈರಾಗ್ಯದ ವ್ಯಂಗವಾಡಿದ ಎಚ್ಡಿಕೆ, ನಂದು ಬಿಡಿ, ಹಾಲಿ ಸಂಸದರ ಕಥೆಯೇ ಕೇಳಿ, ಭ್ರಷ್ಟಾಚಾರದ ಮಧ್ಯೆ ಚುನಾವಣೆ ಬೇಡ ಅಂತಿದ್ದಾರೆ, ಅಂತವರೇ ಚುನಾವಣೆ ಬೇಡ ಅಂತ ಹೇಳ್ತಿರುವಾಗ ನಮ್ಮದೆಲ್ಲಾ ಯಾವ ಲೆಕ್ಕ ಎಂದರು.
ಲೋಕಸಭಾ ಚುನಾವಣಾ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಜಾಣ್ಮೆಯ ಉತ್ತರ ನೀಡಿದ ಮಾಜಿ ಸಿಎಂ,
ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ. ಇದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನ ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು, ಸೋತವರ ಜೊತೆ ಮಾತನಾಡಿದ್ದೇನೆ.
ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡುತ್ತಿದ್ದೇವೆ ಎಂದರು.